...ಕೆಸರು ಗದ್ದೆ, ಒಣಗಿದರೆ ಕಣ್ಣೆಲ್ಲ ಒದ್ದೆ
ಕನ್ನಡಪ್ರಭ ವಾರ್ತೆ ಮುದಗಲ್ ಜು.26
ಮಳೆ ಬಂದರೆ ಸಾಕು ಪಟ್ಟಣದಲ್ಲಿನ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿ ಪರಿವರ್ತನೆಗೊಂಡು ದಾರಿಹೋಕರ ಮೈಯಲ್ಲಾ ಒದ್ದೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ತೆಗ್ಗು ದಿನ್ನೆಗಳಿಂದ ಕೂಡಿದ ರಸ್ತೆ ಮೇಲಿನ ಸಂಚಾರದಿಂದ ಧೂಳೆದ್ದು ಕಣ್ದೆರೆಯಲಾಗದೆ ಹರಸಹಸ ಮಾಡುತ್ತ ಸಾಗಬೇಕಾಗುತ್ತದೆ.
ಪಟ್ಟಣದ ಪೊಲೀಸ್ ಠಾಣೆಯಿಂದ ಮದರ್ ತೆರೇಸಾ ಶಾಲೆವರೆಗೆ, ಬಾಗಲಕೋಟೆ ಮುಖ್ಯ ರಸ್ತೆಯಿಂದ ಖಾದ್ರಿ ಕಾಲೋನಿವರೆಗೆ, ಚಾವಡಿಯಿಂದ ಹಳೇಪೇಟೆವರೆಗೆ... ಹೀಗೆ ಪಟ್ಟಣದ ಯಾವುದೇ ವಾರ್ಡ್, ಗಲ್ಲಿಗಳಿಗೆ ಹೋದರೂ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಕಳೆದ ಐದು ವರ್ಷಗಳ ಹಿಂದೆ ನಿರ್ಮಿಸಿದ ಡಾಂಬರ್ ರಸ್ತೆಗಳು ಸಂಪೂರ್ಣ ಮಾಯವಾಗಿದ್ದು ಗುಂಡಿಗಳು ಬಿದ್ದು ಮಳೆ ಬಂದರೆ ಸಾಕು ಕೆರೆಯಂತಾಗುತ್ತವೆ. ಬಸ್ ನಿಲ್ದಾಣ ರಸ್ತೆ, ಗಣೇಶ ಕೆಫೆ ಮುಂಭಾಗದ ರಸ್ತೆಗಳು ಇದಕ್ಕೆ ಹೊರತಾಗಿಲ್ಲ.
ರಸ್ತೆಯಲ್ಲಿ ಚರಂಡಿ ನೀರು: ಹೊಸ ಮನೆ ನಿರ್ಮಿಸುವವರಿಂದ ಹಿಡಿದು ಮಳಿಗೆ ಮುಂತಾದ ಕಟ್ಟಡಗಳನ್ನು ಕಟ್ಟುವವರು ರಸ್ತೆಯಲ್ಲೇ ಮರಳು, ಕಲ್ಲು ಹಾಕುತ್ತಿದ್ದರಿಂದ ನಿರ್ಮಿಸಿದ ರಸ್ತೆಗಳು ಹಾಳಾಗಿವೆ. ಮಳೆ ನೀರು ಹರಿದು ಹೋಗದಂತೆ ಕಟ್ಟಡ ಮಾಲೀಕರು ಚರಂಡಿಗಳನ್ನು ಬಂದ್ ಮಾಡಿದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಮತ್ತಷ್ಟು ಹಾಳಾಗಲು ಕಾರಣವಾಗಿದೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಆಡಳಿತಾಧಿಕಾರಿಗಳು ಇಂತಹವರ ಮೇಲೆ ಕ್ರಮ ಜರುಗಿಸಿಲ್ಲ. ನಿರ್ಲಕ್ಷ್ಯ ತಾಳಿದ್ದರಿಂದ ರಸ್ತೆಗಳು ಸಂಪೂರ್ಣ ಹಾಳಾಗಲು ಕಾರಣವಾಗಿದೆ ಎಂದ ಸಾರ್ವಜನಿಕರು ಆರೋಪಿಸಿದ್ದಾರೆ.
ಅನುದಾನ: ಕಳೆದ 5 ವರ್ಷಗಳ ಅವಧಿಯಲ್ಲಿ ಪಟ್ಟಣ ಪಂಚಾಯಿತಿಗೆ ಎಸ್ಎಫ್ಸಿ ಅನುಧಾನ, ನಗರೋತ್ಥಾನ ಅನುದಾನ ಸೇರಿ ಇಲ್ಲಿಯವರೆಗೆ 10 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ.
ಈ ಅನುದಾನದಲ್ಲಿ ಅನೇಕ ರಸ್ತೆಗಳ ಡಾಂಬರೀಕರಣ ಮಾಡಲಾಗಿದೆ, ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಎಲ್ಲವೂ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಸಂಪೂರ್ಣ ಹಾಳಾಗಿವೆ. ಇನ್ನು ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗಳನ್ನು ಸೇರಿಸಲಾಗಿದ್ದು ಜನಸಂಪರ್ಕ ಇಲ್ಲದ, ರಾಜಕಾರಣಿಗಳು ತಮಗೆ ಅನುಕೂಲವಾಗುವಂತೆ ರಸ್ತೆಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿ ಕಳಿಸಿದ್ದು ಟೆಂಡರ್ ಕರೆಯುವುದು ಬಾಕಿಯಿದೆ.
ಪ್ರತಿ ಬಾರಿ ರಸ್ತೆ ಡಾಂಬರೀಕರಣ ಮಾಡಿಸುವ ಬದಲಾಗಿ ಪಟ್ಟಣದಲ್ಲಿರುವ ಎಲ್ಲ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಿದರೆ ಅನೇಕ ವರ್ಷ ಬಾಳಿಕೆ ಬರುತ್ತವೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸದ್ಯ ಇರುವ ರಸ್ತೆಗಳಲ್ಲಿನ ಸಂಚಾರ ಜೀವಕ್ಕೆ ಸಂಚಕಾರ ತರುತ್ತದೆ. ವಾಹನಗಳ ಓಡಾಟ ಹೆಚ್ಚಿದ್ದು ಅಪಘಾತಕ್ಕೆ ಅಹ್ವಾನ ನೀಡುವಂತಿವೆ. ಅಧಿಕಾರಿಗಳು ಎಚ್ಚೆತ್ತು ರಸ್ತೆಗಳ ದುರಸ್ತಿಗೆ ಮುಂದಾಗಬೇಕಾಗಿದೆ.
- ಪಂಪಯ್ಯ ಮಠ