ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೇದಾರ ಪೀಠ ವಿವಾದ ಅಂತ್ಯ; ಪರಂಪರಾಗತ ಪದ್ಧತಿಗೆ ಧಕ್ಕೆಯಿಲ್ಲ

Lingaraj Badiger
Updated On : 27 Jul 2013, 11:24 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.26
ಉತ್ತರಾಖಂಡದಲ್ಲಿ ಪ್ರವಾಹ ನಂತರ ಕೇದಾರ ಪೀಠದ ಪೂಜಾ ಧಾರ್ಮಿಕ ಕಾರ್ಯದ ಬಗ್ಗೆ ಸ್ವರೂಪಾನಂದ ಎಂಬವರು ಅನಗತ್ಯ ವಿವಾದ ಉಂಟು ಮಾಡಿದ್ದು, ಅದರಿಂದ ಯಾವುದೇ ಪರಿಣಾಮವಾಗದು. ಕೇದಾರ ಪೀಠದಿಂದಲೇ ಕೇದಾರನಾಥ ದೇಗುಲದಲ್ಲಿ ಪರಂಪರಾಗತವಾಗಿ ಪೂಜೆ ವಿಧಿ-ವಿಧಾನಗಳನ್ನು ನೆರವೇರಿಸುತ್ತಿದ್ದು ಯಾವುದೇ ಬದಲಾವಣೆಗೆ ಅವಕಾಶವಿಲ್ಲ ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇದಾರ ಪೀಠವು ಶತ ಶತಮಾನಗಳಿಂದ ಕೇದಾರ ದೇವಾಲಯದಲ್ಲಿ ಪೂಜೆ ಮಾಡಿಕೊಂಡು ಬಂದಿದೆ. ಆದರೆ ಪ್ರವಾಹ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಕೇದಾರನಾಥ ಮತ್ತಿತರೆ ಉತ್ಸವ ಮೂರ್ತಿಗಳನ್ನು ಸುರಕ್ಷತೆ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸಿ ಪೂಜಾ ಕೈಂಕರ್ಯ ಕೈಗೊಂಡಿದ್ದರ ಬಗ್ಗೆ ಸ್ವರೂಪಾನಂದ ಎಂಬುವವರು ಆಕ್ಷೇಪಿಸಿದ್ದಾರೆ ಎಂದು ತಿಳಿಸಿದರು.
ಮೂರ್ತಿ ಸ್ಥಳಾಂತರ ಉದ್ದೇಶ: ಸ್ವರೂಪಾನಂದ ಅವರಿಗೆ ಮಾಹಿತಿಯ ಕೊರತೆಯಿದೆ. ಚಳಿಗಾಲದ ಸಂದರ್ಭದಲ್ಲಿ ಕೇದಾರನಾಥದಲ್ಲಿ ಜೀವನ ನಡೆಸುವುದು ಕಷ್ಟದ ಮಾತು. ಅಂಥ ಸಂದರ್ಭದಲ್ಲಿ ದೇವಾಲಯದಲ್ಲಿನ ಉತ್ಸವ ಮೂರ್ತಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ಅಲ್ಲಿಯೇ ಪೂಜೆ ನಡೆಸಿಕೊಂಡು ಬರುವುದು ಪರಂಪರಾಗತವಾಗಿ ನಡೆದು ಬಂದಿದೆ. ಸದ್ಯ ಪ್ರವಾಹದ ಹಿನ್ನೆಲೆ ಪೂಜಾ ಕಾರ್ಯ ನಿಲ್ಲಬಾರದು ಎಂಬ ಉದ್ದೇಶದಿಂದ ಉತ್ಸವ ಮೂರ್ತಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಆದರೆ ಈ ಬಗ್ಗೆ ಅನಗತ್ಯವಾಗಿ ಗೊಂದಲ ಎಬ್ಬಿಸಿರುವ ಸ್ವರೂಪಾನಂದ ಅವರು, ಕೇದಾರ ಪೀಠದ ಬಗ್ಗೆ ವಿವಾದ ಸೃಷ್ಟಿಸುವ ಕಾರ್ಯ ಮಾಡಿದ್ದಾರೆ. ಈಗ ಅದು ಬಗೆಹರಿದಿರುವ ವಿಚಾರ. ಅನೇಕ ಶತಮಾನಗಳಿಂದ ಕೇದಾರ ಪೀಠದ ವ್ಯಾಪ್ತಿಯ ಕೇದಾರನಾಥ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಕರ್ನಾಟಕದವರಿಗೆ ವೈದಿಕ ಶಿಕ್ಷಣ ಪಡೆದವರಿಂದಲೇ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಭೇದ- ಭಾವವಿಲ್ಲ: ಉತ್ತರಾಖಂಡದ ಪ್ರವಾಹ ಪರಿಹಾರ ಕಾರ್ಯಗಳಿಗೆ ಸ್ಥಳೀಯ ಸರ್ಕಾರಕ್ಕೆ ಕಾಶೀ ಪೀಠವು ಈಗಾಗಲೇ 2 ಲಕ್ಷ ಸಲ್ಲಿಸಿದೆ ಎಂದ ಅವರು, ಪಂಚಪೀಠಗಳು ವೀರಶೈವರನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿವೆ. ಪಂಚಪೀಠಗಳಿಗೆ ವೀರಶೈವ ಧರ್ಮದ ಒಳಪಂಗಡಗಳ ಬಗ್ಗೆ ಯಾವುದೇ ಭೇದ- ಭಾವ ಮಾಡುತ್ತಿಲ್ಲ ಎಂದರು.
ಪಂಚಪೀಠಗಳಲ್ಲಿ ಅಲ್ಪ ಭಿನ್ನಾಭಿಪ್ರಾಯವಿದ್ದದ್ದು ನಿಜ. ಶ್ರೀಶೈಲ ಪೀಠದ ಉತ್ತರಾಧಿಕಾರಿ ನೇಮಕ ಸಂದರ್ಭದಲ್ಲಿ ಉಂಟಾದ ಸಣ್ಣ ತಾಂತ್ರಿಕ ಸಮಸ್ಯೆಯಿಂದ ಭಿನ್ನಭಿಪ್ರಾಯ ಉಂಟಾಗಿತ್ತು. ಆದರೆ ಅದು ಈಗ ಬಗೆಹರಿದಿದೆ. ಉತ್ತರ ಭಾರತದಲ್ಲಿಯೂ ವೀರಶೈವರಿದ್ದು ಅಂಥವರನ್ನೂ ಒಗ್ಗೂಡಿಸುವಿಕೆಗೆ ಪಂಚಪೀಠಗಳು ಈಗ ಮುಂದಾಗಿವೆ. ಅವರಿಗೆ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣದ ಮಹತ್ವ ಮತ್ತು ಗ್ರಂಥದ ಸಾರ ತಿಳಿಸಿಕೊಡುವ ಕಾರ್ಯ ಜಾರಿಯಲ್ಲಿದೆ ಎಂದು ಹೇಳಿದರು.
ಧರ್ಮದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ: ರಾಜಕೀಯ ವ್ಯವಸ್ಥೆಯನ್ನು ತಿದ್ದುವ ಹಕ್ಕು ಧರ್ಮಾಧಿಕಾರಿಗಳಿಗಿದೆ. ಧರ್ಮದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ. ಈ ಹಿಂದೆಯೂ ಅನೇಕ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಧರ್ಮಪೀಠಗಳು ಬುದ್ಧಿ ಹೇಳಿದ ಉದಾಹರಣೆಗಳು ನಮ್ಮಲ್ಲಿವೆ. ಹೀಗಾಗಿ ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದರು.
ಸಾಮಾಜಿಕ ನ್ಯಾಯ, ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ಅನೇಕ ಜಾತಿ ಜನಾಂಗಗಳಲ್ಲಿ ಹೊಸ ಮಠಗಳ ಸ್ಥಾಪನೆಯಾಗುತ್ತಿದೆ. ಅದರಿಂದ ಅಂಥ ಜಾತಿ ಜನಾಂಗದವರಿಗೆ ಲಾಭವಾಗಿರಲೂಬಹುದು. ಆದರೆ ಧರ್ಮಪೀಠಗಳನ್ನು ಅನಗತ್ಯ ವಿವಾದಕ್ಕೆ ಸಿಲುಕಿಸುವುದು ಸರಿಯಲ್ಲ. ಧರ್ಮಪೀಠಗಳಿಗೆ ಅಪವಾದ ಬರುವುದು ತೀರಾ ಸಹಜ. ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಾದ ಅವಶ್ಯಕತೆಯಿಲ್ಲ ಎಂದು ಹೇಳಿದರು.
ವೀರಶೈವ ಧರ್ಮ ಜಾಗೃತಿ: ವೀರಶೈವರ ಪವಿತ್ರ ಗ್ರಂಥ ಸಿದ್ಧಾಂತ ಶಿಖಾಮಣಿಯನ್ನು 8 ವಿವಿಧ ಭಾಷೆಗಳಲ್ಲಿ ಭಾಷಾಂತರಿಸಿ ವೀರಶೈವರಿಗೆ ವಿತರಣೆ ಮೂಲಕ ಧರ್ಮ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ. ಶೀಘ್ರದಲ್ಲಿಯೇ ನೇಪಾಳಿ ಭಾಷೆಯಲ್ಲಿ ಮುದ್ರಣಗೊಂಡು ದೀಪಾವಳಿ ವೇಳೆಗೆ ನೇಪಾಳದಲ್ಲಿ ಗ್ರಂಥ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement