ಮಕ್ಕಳ ಕ್ರೀಡಾ ಸಾಧನೆಗೆ ಶ್ಲಾಘನೆ
ಕನ್ನಡಪ್ರಭ ವಾರ್ತೆ ಮುದಗಲ್ ಜು.27
ಸ್ಥಳೀಯ ಸರ್ಕಾರಿ ಕೇಂದ್ರ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ವಿವಿಧ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಕ್ಕೆ ಶಾಲೆಯ ಮುಖ್ಯಗುರು ಶಿವಯೋಗಪ್ಪ ಅಭಿನಂದಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
ಶಾಲೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಬಡ್ಡಿ, ವಾಲಿಬಾಲ್ ಮುಂತಾದ ಕ್ರೀಡೆಯಲ್ಲಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದವರೆಗೆ ಸ್ಪರ್ಧಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪಾಲಕರು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕರು ಸಹಕಾರ ನೀಡಬೇಕು ಎಂದರು.
ಶಾಲಾ ಮಕ್ಕಳ ಸಾಧನೆಗೆ ಸ್ಥಳೀಯ ಅಶ್ವಿನಿ ರಿಕ್ರೇಶನ್ ಕ್ಲಬ್ನವರು ಬಹುಮಾನ ನೀಡಿ ಗೌರವಿಸಿದ್ದಾರೆ. ರಾಘವೇಂದ್ರ ಟೂಟರಿಯಲ್ಸ್ನ ಅಧ್ಯಕ್ಷ ಸಂಗಮೇಶ ಹಿರೇಮಠ ಶಾಲಾ ಮಕ್ಕಳ ಸಾಧನೆಗೆ ಸಮವಸ್ತ್ರ ನೀಡಿ ಗೌರವಿಸಿದರು.
ಬಾಲಕಿಯರ ಪ್ರೌಢಶಾಲೆ ದೈಹಿಕ ಶಿಕ್ಷಕ ಬಾಲನಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಅವಶ್ಯವಾಗಿ ಬೇಕು. ಮಕ್ಕಳ ಸಾಮರ್ಥ್ಯ ಹೆಚ್ಚಿಸಲು ಕ್ರೀಡೆ ಮಹತ್ವದ್ದಾಗಿದೆ. ಕ್ರೀಡೆಯಲ್ಲಿ ಗ್ರಹಿಕೆ, ಜಾಣ್ಮೆ ಅವಶ್ಯಕವಾಗಿ ಬೇಕು ಎಂದು ಹೇಳಿದರು.
ಇನ್ನೊಬ್ಬ ದೈಹಿಕ ಶಿಕ್ಷಕ ರಮೇಶ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ರಾಮು ಉಪ್ಪಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಪಂ ಸದಸ್ಯ ಶಿವರಾಜ ತಳವಾರ, ರಾಘವೇಂದ್ರ ಟೂಟರಿಯಲ್ಸ್ನ ಸಂಗಮೇಶ ಹಿರೇಮಠ, ಶಾಲಾ ಶಿಕ್ಷಕರ ಸಂಘದ ಸದಸ್ಯೆ ಅಕ್ಕಮಹಾದೇವಿ ಉಪಸ್ಥಿತರಿದ್ದರು.