ನವಲಿ ಜಡೆ ಶಂಕರಲಿಂಗ ದೇವಸ್ಥಾನ ಜಲಾವೃತ
ಮುದಗಲ್: ಸಮೀಪದ ನವಲಿ ಗ್ರಾಮದಲ್ಲಿ ಐತಿಹಾಸಿಕ ಜಡೆ ಶಂಕರಲಿಂಗ ದೇವಸ್ಥಾನಕ್ಕೆ ತಡೆಗೋಡೆ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು, ಸದ್ಯ ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಜಲಾವೃತಗೊಂಡಿದೆ.
ಜಡೆ ಶಂಕರಲಿಂಗ ದೇವಸ್ಥಾನದ ರಕ್ಷಣೆಗೆ ಸರ್ಕಾರ ತಡೆಗೋಡೆ ನಿರ್ಮಾಣ ಕಾರ್ಯವನ್ನು ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಿತ್ತು. ಈ ಕಾಮಗಾರಿಗೆ ಆರಂಭದಲ್ಲಿ 170.60 ಲಕ್ಷ ಮಂಜೂರಾಗಿತ್ತು. ಮತ್ತೆ ಹೆಚ್ಚುವರಿಯಾಗಿ 2.6 ಕೋಟಿ ಮಂಜೂರುಗೊಳಿಸಿ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು 12 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೂ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ಈ ದೇವಸ್ಥಾನ ಪ್ರಖ್ಯಾತವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳ, ಅಧಿಕಾರಿಗಳ, ಹಾಗೂ ಇತಿಹಾಸಕ್ತರ ನಿರ್ಲಕ್ಷ್ಯದಿಂದ ಪ್ರಖ್ಯಾತ ದೇವಸ್ಥಾನ ಬಸವಸಾಗರ ಹಿನ್ನೀರಿನ ಬಸಿನೀರಿನಲ್ಲಿ ಮುಳುಗಡೆಗೊಳ್ಳುತ್ತಿದೆ. ದೇವಸ್ಥಾನ ಪುನಶ್ಚೇತನಕ್ಕೆ ಪ್ರಾಚ್ಯ ವಸ್ತು ಇಲಾಖೆ ಮುಂದಾಗಬೇಕೆಂದು ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ.