ಬದುಕಿಗೆ ನೆಮ್ಮದಿ ಕೊಡದ 'ಆಸರೆ'
ಕ.ಪ್ರ. ವಾರ್ತೆ, ರಾಯಚೂರು, ಜು.28
ಜಿಲ್ಲೆಯ ಪ್ರವಾಹ ಪೀಡಿತರಿಗೆ ಆಸರೆ ದೊರೆತರೂ ಬದುಕು ಸುರಕ್ಷಿತವಲ್ಲ. ಅಲ್ಪ ಮಳೆಗೂ ಸೂರಿನಿಂದ ತೊಟ್ಟಿಕ್ಕುವ ಮಳೆಯ ನೀರು, ವಿದ್ಯುತ್ ಸಂಪರ್ಕದ ಕೊರತೆ. ಕುಡಿಯುವ ನೀರಿಗೆ ಕಿಮೀಗಟ್ಟಲೆ ಅಲೆದಾಟ. ಸಮಸ್ಯೆಗಳ ಸರಮಾಲೆಯಿರುವ ಮನೆಯಲ್ಲಿಯೇ ಅಭದ್ರತೆ ಮಧ್ಯೆ ಜೀವನ ನಡೆಸದಿದ್ದರೆ ಅಧಿಕಾರಿಗಳ ಬೆದರಿಕೆ. ಕಂಟಕಪ್ರಾಯವಾಗಿರುವ ಆಸರೆ ವಾಸ ಜೀವಕ್ಕೆ ಅಪಾಯ ಕರೆಗಂಟೆ ಮೊಳಗಿಸಿದೆ. ದೇವದುರ್ಗ ತಾಲೂಕಿನ ಮ್ಯಾದರೋಗಳ ಸೇರಿ ಜಿಲ್ಲೆಯ ಬಹುತೇಕ ಕಡೆ ಸರ್ಕಾರ 2009ರ ಪ್ರವಾಹ ಪೀಡಿತರಿಗೆ ಒದಗಿಸಿದ ಆಸರೆ ಮನೆಗಳ ಸದ್ಯದ ದುಃಸ್ಥಿತಿಯಿದು.
ಸೌಲಭ್ಯಗಳ ಕೊರತೆ: ಪ್ರವಾಹ ಬಂದರೆ ನೆರವು ದೊರೆಯದು ಎಂಬ ಆಡಳಿತದ ಎಚ್ಚರಿಕೆ. ಮಂಜೂರಾದ ಆಸರೆ ಮನೆಗಳಿಗೆ ತೆರಳಿ ವಾಸವಾಗಿದ್ದರೆ ಮನೆಯೇ ಕುಸಿದು ಬೀಳುವ ಭೀತಿ. ಅಲ್ಪ ಮಳೆಗೂ ಸೋರುವ ಸೂರು, ಸೌಲಭ್ಯಗಳ ಕೊರತೆಯ ಮಧ್ಯೆ ನೆರೆ ಸಂತ್ರಸ್ತರ ಬದುಕು ಅಕ್ಷರಶಃ ಮೂರಾಬಟ್ಟೆ.
ಜಿಲ್ಲಾಡಳಿತ 2009ರಲ್ಲಿ ಉಂಟಾಗಿದ್ದ ಪ್ರವಾಹದ ಸಂದರ್ಭ ಜಿಲ್ಲೆಯಲ್ಲಿ ತೊಂದರೆಗೊಳಗಾಗಿದ್ದ 53 ಗ್ರಾಮಗಳ ಸ್ಥಳಾಂತರಕ್ಕೆ ಯೋಜಿಸಿತು. ಅದರಂತೆ ಸುಮಾರು 10 ಸಾವಿರಕ್ಕೂ ಹೆಚ್ಚಿನ ಆಸರೆ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ. ಆದರೆ ಸರ್ಕಾರ ವಿವಿಧ ಏಜೆನ್ಸಿಗಳ ಮೂಲಕ ನಿರ್ಮಿಸಿದ ಆಸರೆ ಮನೆಗಳ ಕಾಮಗಾರಿ ಮಾತ್ರ ಜೀವಕ್ಕೆ ಅಪಾಯ ತರುವಷ್ಟು ಅಪಾಯಕಾರಿಯಾಗಿದೆ ಎಂಬುದು ದಿನಗಳೆದಂತೆ ಸಾಬೀತಾಗತೊಡಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ತ್ವರಿತವಾಗಿ ಸೂರು ಒದಗಿಸಬೇಕೆಂಬ ಆತುರದಲ್ಲಿ ಜಿಲ್ಲೆಯ ವಿವಿಧೆಡೆ ನಿರ್ಮಿಸಿದ ಬಹುತೇಕ ಕಡೆಯ ಮನೆಗಳ ಸೂರು ಸೋರಿಕೆಯಾಗುತ್ತಿದೆ. ಆರಂಭದಲ್ಲಿಯೇ ರಾಯಚೂರು ತಾಲೂಕಿನ ಎನ್.ಮಲ್ಕಾಪುರ ಗ್ರಾಮದ ಆಸರೆ ನಿವಾಸಿಗಳಿಂದ ಮನೆಗಳು ಮಳೆಗಾಲದಲ್ಲಿ ಸೋರುವ ಬಗ್ಗೆ ದೂರಿತ್ತು.
ಅವ್ಯವಸ್ಥೆ ಸರಮಾಲೆ: ಈಗ ದೇವದುರ್ಗ ತಾಲೂಕಿನ ಮ್ಯಾದರಗೋಳ ಗ್ರಾಮದ ನಿವಾಸಿಗಳು ತೀರಾ ಹೀನಾಯ ಸ್ಥಿತಿಯಲ್ಲಿ ಆಸರೆ ಮನೆಗಳಲ್ಲಿ ಬದುಕು ಕಳೆಯುತ್ತಿದ್ದಾರೆ. ಕಳೆದ ವಾರ ಸುರಿದ ಮಳೆಗೆ ಆಸರೆ ಮನೆಗಳು ಸೋರುತ್ತಿವೆ. ಅಷ್ಟೇ ಅಲ್ಲ ವಾರದ ಹಿಂದೆ ಸುರಿದ ಮಳೆಗೆ ಗೋಡೆಯಲ್ಲಿ ನೀರು ಸೇರಿಕೊಂಡಿದ್ದು, ಗೋಡೆಗಳು ಬಣ್ಣ ಕಳೆದುಕೊಂಡಿವೆ.
ಇನ್ನು ಗ್ರಾಮದ ಆಸರೆ ಕಾಲನಿಯಲ್ಲಿ 100 ಮನೆಗಳಿದ್ದು, ಅಲ್ಲಿನ ಸೌಲಭ್ಯಗಳ ಕೊರತೆಯಿಂದಾಗಿ ಕೇವಲ 40 ಮನೆಗಳಲ್ಲಿ 40 ಕುಟುಂಬಗಳು ಬದುಕು ಸಾಗಿಸುತ್ತಿವೆ. ಆಸರೆ ಕಾಲನಿಗೆ ವಿದ್ಯುತ್ ಸಂಪರ್ಕವಿಲ್ಲ. ರಾತ್ರಿ ವಿಷಜಂತುಗಳ ಕಾಟ. ಸರಿಯಾದ ರಸ್ತೆ, ಕುಡಿಯುವ ನೀರಿನ ಸೌಲಭ್ಯವಿಲ್ಲ. ಆಸರೆ ಕಾಲನಿ ನಿವಾಸಿಗಳು ದೂರದ ಕೃಷ್ಣಾ ನದಿಯಿಂದಲೇ ನೀರು ಹೊತ್ತು ತರುತ್ತಾರೆ.
ಸದ್ಯ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನದಿ ಅಪಾಯ ಮಟ್ಟದಲ್ಲೇನೂ ಹರಿಯುತ್ತಿಲ್ಲ. ಆದರೆ ಭಾರೀ ಪ್ರಮಾಣದಲ್ಲಿ ಪ್ರವಾಹ ಉಂಟಾದರೆ ಮ್ಯಾದರಗೋಳ ಪುನಾವಸತಿ ಗ್ರಾಮದವರಿಗೆ ಕುಡಿವ ನೀರಿಗೆ ಟ್ಯಾಂಕರ್ ಗತಿಯಾಗುತ್ತದೆ.
ಜೀವನ ಕಷ್ಟ: ಮ್ಯಾದರೋಗಳ ಹಳೆಯ ಗ್ರಾಮದಲ್ಲಿ ಕೆಲವರು ವಾಸಿಸುತ್ತಿದ್ದು ಅವರು ಆಸರೆ ಮನೆಗಳಿಗೆ ತೆರಳಲು ಸಿದ್ಧರಿಲ್ಲ. ಕಳಪೆ ಮನೆಗಳು, ಸೌಲಭ್ಯಗಳ ಕೊರತೆಯಿಂದಾಗಿ ಹಳೆಯ ಊರಿನ ಮನೆಯೇ ಗತಿ ಎಂದು ಹೇಳುತ್ತಿದ್ದಾರೆ.
'ಕನ್ನಡಪ್ರಭ' ಜೊತೆ ಮಾತನಾಡಿದ ಗ್ರಾಮದ ಯುವಕ ಬಸವರಾಜ್, ಆಸರೆ ಮನೆಗಳು ಗಟ್ಟಿಮುಟ್ಟಾಗಿಲ್ಲ. ಎರಡು ಕೋಣೆಗಳಲ್ಲಿ ದೊಡ್ಡ ಕುಟುಂಬಗಳ ಜೀವನ ಕಷ್ಟ. ಹೀಗಾಗಿ ಹಳೆಯ ಊರು ಬಿಡುವುದಿಲ್ಲ ಎಂದಿದ್ದಾರೆ.
ಇನ್ನು ಜಿಲ್ಲಾಡಳಿತ ಪ್ರಸಕ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆಯೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆಸರೆ ಮನೆಗಳ ಗುಣಮಟ್ಟದ ಬಗ್ಗೆ ಗಮನಿಸದೇ ನೆರೆ ಸಂತ್ರಸ್ತರು ತಮಗೆ ಹಂಚಿಕೆಯಾದ ಆಸರೆ ಮನೆಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಎಚ್ಚರಿಸಿದ್ದಾರೆ.
ಹೊಸ ಮನೆಗಳಿಗೆ ತೆರಳದಿದ್ದಲ್ಲಿ ಶೀಘ್ರದಲ್ಲಿಯೇ ಹಳೆಯ ನೆಲಸಮಗೊಳಿಸುವ ಎಚ್ಚರಿಕೆ ಜಿಲ್ಲಾಡಳಿತ ನೀಡಿದೆ. ಒಂದೆಡೆ ಅಲ್ಪ ಮಳೆ ಸುರಿದರೂ ನಿರಂತರ ವಾರಗಟ್ಟಲೆ ತೊಟ್ಟಿಕ್ಕುವ ಆಸರೆ ಮನೆಗಳು, ರಾತ್ರಿಯಾದರೆ ಆಸರೆ ಕಾಲನಿಯಲ್ಲಿ ವಿಷಜಂತುಗಳ ಕಾಟ, ಸೌಲಭ್ಯಗಳ ಕೊರತೆಯಿದೆ. ಪರಿಣಾಮ ಆಸರೆ ನಿವಾಸಿಗಳ ಬದುಕು ಸಂಕಷ್ಟದಲ್ಲಿದೆ.
- ಜಗನ್ನಾಥ ಆರ್. ದೇಸಾಯಿ