ಶುಲ್ಕದ ಅವಾಂತರ
ಸಿಂಧನೂರು: ಶುಲ್ಕ ಭರಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಬಹಿಷ್ಕರಿಸಿ ಅವಮಾನ ಮಾಡಿದ್ದಾರೆ ಎಂದು ಮಂಜೂರ್ ಅಲಿ ರೌಡಕುಂದಾ ನಗರದ ಇಂದಿರಾ ಪ್ರಿಯದರ್ಶಿನಿ ಶಾಲೆ ವಿರುದ್ಧ ದೂರು ಸಲ್ಲಿಸಿದ್ದಾರೆ.
ಈ ಕುರಿತು ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ತಮ್ಮ ಇಬ್ಬರು ಮಕ್ಕಳಾದ ಮಹಿಬೂಬ ಮತ್ತು ತಬ್ರೀಜ್ ಕ್ರಮವಾಗಿ 10 ಮತ್ತು 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಪ್ರವೇಶ ಸಮಯದಲ್ಲಿ ಒಬ್ಬರಿಗೆ 40 ಸಾವಿರ, ಇನ್ನೊಬ್ಬರಿಗೆ 20 ಸಾವಿರ ಶುಲ್ಕ ಪಾವತಿಸಬೇಕೆಂದು ಆಡಳಿತ ಮಂಡಳಿ ಮುಖ್ಯಸ್ಥರಾದ ಜೋತ್ಸ್ನಾ ಹೇಳಿದ್ದರು.
ಆದರೆ ತಮಗೆ ಅಷ್ಟು ಹಣ ಕಟ್ಟಲಾಗುವುದಿಲ್ಲ ಎಂದು ಹೇಳಿ 55 ಸಾವಿರ ಪಾವತಿಸಿದ್ದೆ. ಉಳಿದ ಹಣವನ್ನು ಜು.20ರೊಳಗೆ ಕೊಡಬೇಕೆಂದು ತಮ್ಮ ಮಕ್ಕಳಿಗೆ ಹೇಳಿ ಕಳುಹಿಸಿದ್ದರು. ನಂತರ ಜು.21 ರಂದು ಮಕ್ಕಳನ್ನು ಶಾಲೆಯೊಳಗೆ ಸೇರಿಸದೆ ಹೊರಗೆ ನಿಲ್ಲಿಸಿ ಅವಮಾನ ಮಾಡಿದ್ದಾರೆ.ಜು.27ರಂದು ಮಕ್ಕಳ ಶುಲ್ಕ ಪಾವತಿಸಲು ಹೋದಾಗ ಜೋತ್ಸ್ನಾ ಅವರು ಹಣ ಪಾವತಿಗೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ತಮಗೆ ಹಾಗೂ ಮಕ್ಕಳನ್ನು ನಿಂದಿಸಿ ಟಿಸಿ ಕೊಡುವುದಾಗಿ ಬೆದರಿಸಿದರು. ತಮ್ಮ ವಿರುದ್ಧ ಯಾರಿಗೆ ದೂರು ಕೊಟ್ಟರೂ, ಯಾರೂ ತಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದರು.
ಈ ಕುರಿತು ಶಿಕ್ಷಣಾಧಿಕಾರಿಗಳು ಗಮನಹರಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದ್ದಾರೆ.
ಸೇಂದಿ ಮಾರಾಟ; ಒಬ್ಬನ ಬಂಧನ
ರಾಯಚೂರು: ನಗರದ ಮಂಗಳವಾರಪೇಟೆಯ ಗಣೇಶ ಕಟ್ಟೆ ಹತ್ತಿರ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತನನ್ನು ವಿನೋದ ಎಂದು ಗುರುತಿಸಲಾಗಿದೆ. ಈತ ಗಣೇಶ ಕಟ್ಟೆ ಬಳಿ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ ಸೇಂದಿ ತುಂಬಿದ 25 ಲೀಟರ್‌ನ ಎರಡು ಪ್ಲಾಸ್ಟಿಕ್ ಚೀಲಗಳು ಹಾಗೂ ಸೇಂದಿ ತುಂಬಿದ 2 ಲೀಟರಿನ 4 ಪ್ಲಾಸ್ಟಿಕ್ ಬಾಟಲಿ ಮತ್ತು 20ನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.