'ಸಮಾಲೋಚನೆ ಸಭೆಗಳು ಸಹಕಾರಿ'
ದೇವದುರ್ಗ: ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರ ಸಮಾಲೋಚನಾ ಸಭೆಗಳು ಸಹಕಾರಿಯಾಗಲಿವೆ. ಶಿಕ್ಷಕರು ಪರಸ್ಪರ ಸಮಾಲೋಚನೆ ಮಾಡಿಕೊಳ್ಳುವುದರ ಮೂಲಕ ಶೈಕ್ಷಣಿಕ ಪ್ರಗತಿಗೆ ನೆರವಾಗುವಂತೆ ತಾಲೂಕಿನ ಕ್ಯಾದಿಗ್ಗೇರಾ ಸಿಆರ್ಪಿಯ ಪಾಂಡುರಂಗ ಹೇಳಿದರು.
ಮಲ್ಲೇದೇವರಗುಡ್ಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಯಾದಿಗ್ಗೇರಾ ಮತ್ತು ಮಲ್ಲೇದೇವರಗುಡ್ಡ ಸಿಆರ್ಪಿ ವಲಯ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯ, 6ನೇ ಮತ್ತು 7ನೇ ತರಗತಿಯ ಪರೀಕ್ಷಾ ವಿಧಾನ, ಹೊಸ ಹೊಸ ಬೋಧನಾ ತಂತ್ರಗಳ ಅಳವಡಿಕೆ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಯಿತು. ನಾಗೋಲಿ ಶಾಲೆಯ ಶಿಕ್ಷಕಿ ಅಶ್ವಿನಿ ನಲಿ- ಕಲಿ ವಿಧಾನಗಳಡಿಯಲ್ಲಿ ಮಾದರಿ ಪಾಠ ನೀಡಿದರು. ಸಭೆಯಲ್ಲಿ ವಿರೂಪಣ್ಣಗೌಡ ನಾಗಡದಿನ್ನಿ, ಶಿಕ್ಷಕರಾದ ಹಿರೇಬಸಯ್ಯ, ಹನುಮಂತ ಜಗ್ಲಿ, ಚಂದಪ್ಪ ಹಾಗೂ ಕ್ಯಾದಿಗ್ಗೇರಾ ಮತ್ತು ಶಿಕ್ಷಕ- ಶಿಕ್ಷಕಿಯರು ಪಾಲ್ಗೊಂಡಿದ್ದರು.