63 ಬೋರ್ಗಳು ಆರ್ಸೆನಿಕ್ ಪೀಡಿತ
ಬೆಂಗಳೂರು: ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿನ ನಾಲ್ಕು ತಾಲೂಕುಗಳ 63 ಕೊಳವೆಬಾವಿಗಳ ನೀರು ಆರ್ಸೆನಿಕ್ ಪೀಡಿತವಾಗಿದ್ದು, ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಡಾ.ಎಚ್.ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.
ಈ ಎರಡು ಜಿಲ್ಲೆಗಳಲ್ಲಿ ಆರ್ಸೆನಿಕ್ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಲು ಡಾ.ಸುದರ್ಶನ್ ನೇತೃತ್ವದಲ್ಲಿ ಆರ್.ಎಚ್.ಸಾಹುಕಾರ್, ಶಿವಾನಂದಮೂರ್ತಿ, ಅರುಣ್ ಪಾಟೀಲ್ ಅವರನ್ನು ಒಳಗೊಂಡ ಸಮಿತಿಯನ್ನು ಕೆಲ ದಿನಗಳ ಹಿಂದಷ್ಟೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ರಚಿಸಿದ್ದರು.
ಅಧ್ಯಯನ ಪೂರ್ಣಗೊಳಿಸಿರುವ ಈ ಸಮಿತಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಸೋಮವಾರ ವರದಿ ಸಲ್ಲಿಸಿದೆ.
ವರದಿಯ ಮುಖ್ಯಾಂಶಗಳು ಹೀಗಿವೆ:
ಟಿ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸೂಗುರು, ಮಾನ್ವಿ ಹಾಗೂ ಯಾದಗಿರಿಯ ಸುರಪುರ ತಾಲೂಕಿನ 63 ಕೊಳವೆ ಬಾವಿಗಳು ಆರ್ಸೆನಿಕ್ ಪೀಡಿತ. 18 ಬೋರ್ವೆಲ್ಗಳಲ್ಲಿ ಆರ್ಸೆನಿಕ್ ಪ್ರಮಾಣ 0.5 ಇದ್ದು ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. 29 ಬೋರ್ವೆಲ್ಗಳಲ್ಲಿ ಆರ್ಸೆನಿಕ್ ಪ್ರಮಾಣ 0.1ರಿಂದ 0.5ರಷ್ಟು ಇದ್ದು, ಕುಡಿಯುವುದಕ್ಕೆ ಬಳಸುವಂತಿಲ್ಲ.
ಟಿ ಆರ್ಸೆನಿಕ್ಯುಕ್ತ ನೀರು ಸೇವಿಸಿದ್ದರಿಂದ ಇಬ್ಬರಿಗೆ ಕ್ಯಾನ್ಸರ್ ಬಂದಿದೆ. ಅನೇಕರು ಚರ್ಮರೋಗ ಹಾಗೂ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಟಿ ಹಟ್ಟಿ ಚಿನ್ನದ ಗಣಿಗಾರಿಕೆ ಕಾಲದಲ್ಲಿ ಗುಡ್ಡೆ ಹಾಕಿದ ಸೈನೈಡ್ ತ್ಯಾಜ್ಯದಲ್ಲಿದ್ದ ಆರ್ಸೆನಿಕ್ ಭೂಮಿ ಸೇರಿದ್ದರಿಂದ ಹಾಗೂ ಅಂತರ್ಜಲದ ವಿಪರೀತ ಶೋಷಣೆಯಿಂದ ಈ ಸಮಸ್ಯೆ ಸೃಷ್ಟಿಯಾಗಿದೆ.
ಟಿ ಆರ್ಸೆನಿಕ್ ಪ್ರಮಾಣ 0.1ರಿಂದ 0.5ರವರೆಗೆ ಇರುವ ಕೊಳವೆ ಬಾವಿಗಳನ್ನು ಮರುಪೂರಣ ಮಾಡಬೇಕು. ಜತೆಗೆ ಈ ಪ್ರದೇಶದಲ್ಲಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು.
ಟಿ ಈ ಪ್ರದೇಶಗಳಲ್ಲಿ ಯುನಿಸೆಫ್ ನೆರವಿನೊಂದಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ 20 ಲೀಟರ್ ಕ್ಯಾನ್ಗೆ 2 ಇದೆ. ಸ್ಮಾರ್ಟ್ ಸಂಸ್ಥೆ ರು. 4 ದರದಲ್ಲಿ ನೀರು ಪೂರೈಸುತ್ತಿದ್ದು, ಗ್ರಾಮಸ್ಥರು 1ಗೆ ನೀರು ನೀಡಿ ಎನ್ನುತ್ತಿದ್ದಾರೆ. ಹೀಗಾಗಿ ಹೆಚ್ಚುವರಿ ಹಣವನ್ನು ಹಟ್ಟಿ ಗಣಿ ಸಂಸ್ಥೆಯೇ ಭರಿಸಬೇಕು.
ಟಿ ರಾಯಚೂರು ಹಾಗೂ ಯಾದಗಿರಿಯಲ್ಲಿ ಸುಸಜ್ಜಿತ ಆರ್ಸೇನಿಕ್ ಪರೀಕ್ಷಾಲಯ ತೆರೆಯಬೇಕು.
ಟಿ ಬಹುಗ್ರಾಮ ಯೋಜನೆ ಮೂಲಕ ಎಲ್ಲ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಹಾಗೂ ಮಳೆ ನೀರು ಕೊಯ್ಲು ಯೋಜನೆ ಅಳವಡಿಸಬೇಕು.
ಟಿ ಮುಂಗಾರು ಪೂರ್ವ ಹಾಗೂ ನಂತರದ ದಿನಗಳಲ್ಲಿ ಪ್ರತಿ ವರ್ಷ ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು.
ಟಿ ಆಹಾರಧಾನ್ಯಗಳಲ್ಲಿ ಆರ್ಸೆನಿಕ್ ಅಂಶ ಕಂಡು ಬಂದರೆ, ಬೆಳೆಗಳಿಗೆ ಬೋರ್ವೆಲ್ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು. ಪ್ರಾಣಿಗಳಲ್ಲಿ ಕಂಡು ಬಂದರೆ ಅವುಗಳೂ ಕೊಳವೆ ನೀರನ್ನು ಕುಡಿಯಲು ನೀಡಬಾರದು.
15 ದಿನದಲ್ಲಿ ಕ್ರಿಯಾ ಯೋಜನೆ : ಪಾಟೀಲ್
ಆರ್ಸೆನಿಕ್ ಸಮಸ್ಯೆ ಪರಿಹರಿಸಲು ಹದಿನೈದು ದಿನಗಳಲ್ಲಿ ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದ್ದಾರೆ.
ವರದಿ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಕೆಲ ಬೋರ್ವೆಲ್ಗಳ ಬಳಕೆ ಸ್ಥಗಿತಗೊಳಿಸಲಾಗಿದೆ. ಹಟ್ಟಿ ಚಿನ್ನದ ಗಣಿ ಸಂಸ್ಥೆಯನ್ನೂ ಪರಿಹಾರ ಕಾರ್ಯದಲ್ಲಿ ಸೇರಿಸಿಕೊಂಡು ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು.
ಈ ಭಾಗದಲ್ಲಿ ನೀರಿನ ವ್ಯವಸ್ಥೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡಬೇಕಿದೆ. ಇದಕ್ಕಾಗಿ ಟಾಸ್ಕ್ಪೋರ್ಸ್ ರಚನೆ ಮಾಡಲು ಸರ್ಕಾರ ನಿರ್ಧರಿಸಿದೆ. ಜತೆಗೆ ಆಧುನಿಕ ಉಪಕರಣಗಳನ್ನು ಹೊಂದಿದ ಪ್ರಯೋಗಾಲಯವನ್ನು ಈ ಭಾಗದಲ್ಲಿ ಆರಂಭಿಸುತ್ತೇವೆ ಎಂದರು.