ಅಕ್ರಮ ತೂಬು ವಿವಾದ: ರೈತರ ಪ್ರತಿಭಟನೆ
ಸಿಂಧನೂರು: ಸಿಂಧನೂರು ತಾಲೂಕಿನ ಮಲ್ಕಾಪೂರ ಕ್ಯಾಂಪ್ಬಳಿ ಬರುವ ತುಂಗಭದ್ರಾ ಎಡದಂಡೆ ನಾಲೆಯ 36/ 3 ವಿತರಣಾ ಕಾಲುವೆಗೆ ಅಕ್ರಮವಾಗಿ ತೂಬು ನಿರ್ಮಿಸಿದ್ದನ್ನು ಪ್ರತಿಭಟಿಸಿ ಕೆಳಭಾಗದ ರೈತರು ನೀರಾವರಿ ಇಲಾಖೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿದರು.
ಕೆಳಭಾಗಕ್ಕೆ ಹರಿಯದ ನೀರು: 36 ನೇ ವಿತರಣಾ ಕೆಳಭಾಗಕ್ಕೆ ನೀರು ಹರಿಯುತ್ತಿಲ್ಲ. ಏಕೆಂದರೆ ಅಕ್ರಮವಾಗಿ 15 ಇಂಚು ಎತ್ತರ ನೂರು ಮೀಟರ್ ಉದ್ದದ ಕಾಂಕ್ರಿಟ್ ಬೆಡ್ ಹಾಕಿರುವುದೆ ಈ ಸಮಸ್ಯೆಗೆ ಕಾರಣವಾಗಿದೆ. ಬಹುತೇಕ ನೀರು 36ಣ3ನೇ ವಿತರಣಾ ಕಾಲುವೆಗೆ ಹರಿದು ಹೋಗುತ್ತಿದೆ. ಇದರಿಂದಾಗಿ ಕೆಳಭಾಗದ ಮಲ್ಕಾಪೂರ, ಮಲ್ಕಾಪೂರ ಕ್ಯಾಂಪ್, ಬೂದಿಹಾಳ, ಬೂದಿಹಾಳ ಕ್ಯಾಂಪ್, ಸೋಮಲಾಪೂರ, ಸಾಲಗುಂದಾ, ಕನ್ನಾರಿ, ಮಾಡಸಿರವಾರ, ಅಲಬನೂರ, ಬೆಳಗುರ್ಕಿ ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಒಟ್ಟು 36ನೇ ಕಾಲುವೆಗೆ 45 ಸಾವಿರ ಎಕರೆ ನೀರಾವರಿ ಇದ್ದು, 210 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಕೆಳಭಾಗದ 25 ಸಾವಿರ ಎಕರೆಗೆ ಹರಿಯುವ ನೀರನ್ನು ತಡೆಗಟ್ಟಿ ಕೇವಲ 2700 ಎಕರೆ ಜಮೀನಿಗೆ ನೀರು ಬಿಡುತ್ತಿರುವ ಧೋರಣೆಯನ್ನು ರೈತ ಮುಖಂಡರು ತೀವ್ರವಾಗಿ ಟೀಕಿಸಿದರು.
ತಪ್ಪಾಗಿ ತೂಬು ನಿರ್ಮಾಣ: ಕಳೆದ ಎರಡು ವರ್ಷದ ಹಿಂದೆ ಕಾಲುವೆ ದುರಸ್ತಿ ಮಾಡುವಾಗ ತಪ್ಪಾಗಿ ತೂಬು ನಿರ್ಮಾಣಗೊಂಡಿದೆ ಎಂದು ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಆರ್. ಮುಲ್ಲಾ ಹೇಳುತ್ತಿದ್ದಂತೆ ಆಕ್ರೋಶಗೊಂಡ ರೈತ ಸಮುದಾಯ ಉದ್ದೇಶ ಪೂರ್ವಕವಾಗಿ ತೂಬು ಕಟ್ಟಲಾಗಿದೆ. ಕೂಡಲೇ ಆ ತೂಬನ್ನು (ಡ್ರಾಪ್) ಒಡೆದು ಕೆಳಭಾಗದ ರೈತರಿಗೆ ನೀರು ಹರಿಸುವಂತೆ ಒತ್ತಾಯಿಸಿದರು. ಆದಷ್ಟು ಶೀಘ್ರವಾಗಿ ಈ ಅವ್ಯವಸ್ಥೆಯನ್ನು ಸರಿಪಡಿಸುವುದಾಗಿ ಮುಲ್ಲಾ ಭರವಸೆ ನೀಡಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಬಿಜೆಪಿ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ತಾಪಂ ಸದಸ್ಯ ಚಂದ್ರಭೂಪಾಲ ನಾಡಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಭೀಮಣ್ಣ, ಜೆಡಿಎಸ್ ತಾಲೂಕಾ ಕಾರ್ಯದರ್ಶಿ ಸಾಯಿರಾಮಕೃಷ್ಣ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ರಾಮಚಂದ್ರರಾವ್, ಸೋಮಲಾಪುರ ಈರಣ್ಣ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.