'ಕುರಾನ್ನಲ್ಲಿ ಎಲ್ಲ ಧರ್ಮಗಳ ಸಾರವಿದೆ'
ಸಿಂಧನೂರು: ಮುಸ್ಲಿಂರ ಪವಿತ್ರ ಗ್ರಂಥ ಕುರಾನ್ನಲ್ಲಿ ಎಲ್ಲ ಧರ್ಮಗಳ ಸಾರ ಅಡಗಿದೆ ಎಂದು ಕನಕದಾಸ ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ಚನ್ನಬಸವ ಸಜ್ಜನ್ ಹೇಳಿದರು.
ಆಡಮ್ಸ್ ಪ್ರೌಢಶಾಲೆ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೆಷನ್ (ಎಐಐಟಿಎ) ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಇಫ್ತಿಯಾರ್ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಉಪವಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದಕ್ಕೆ ಧಾರ್ಮಿಕ ಲೇಪನ ಹಚ್ಚಿ ದೇವರ ಹೆಸರಿನಲ್ಲಿ ಉಪವಾಸ ಮಾಡಿದರೆ ದೈವೀ ಭಾವನೆಯಿಂದ ಜನ ಉಪವಾಸ ವ್ರತ ಆಚರಿಸುತ್ತಿದ್ದಾರೆ ಎಂಬ ನಂಬಿಕೆಯಿಂದ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಒಂದು ತಿಂಗಳ ಪರ್ಯಂತ ಉಪವಾಸ ವ್ರತವನ್ನು ಆಚರಿಸುತ್ತಾರೆ ಎಂದರು.
ತುರ್ವಿಹಾಳ ಪ.ಪೂ. ಕಾಲೇಜಿನ ಉಪನ್ಯಾಸಕ ವೀರಭದ್ರಪ್ಪ ಮಾತನಾಡಿ, ಕೋಮುವಾದ ಮತ್ತು ಭಯೋತ್ಪಾದನೆಯಿಂದ ದೇಶದ ಜನತೆ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಧರ್ಮದ ಆಚರಣೆ ಮೂಲಕ ಕೋಮುವಾದಕ್ಕೆ ಪೂರ್ಣ ವಿರಾಮ ಹಾಕಬೇಕೆನ್ನುವ ಸದುದ್ದೇಶವಿದೆ. ಉಪವಾಸದಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಆರ್.ಎಚ್.ನಂ.1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹುಸೇನಬಾಷ ಮಾತನಾಡಿ, ರಂಜಾನ್ ಸಮಯದಲ್ಲಿ ಮುಸ್ಲಿಂರು ಹದಿನಾಲ್ಕುವರೆ ಗಂಟೆಗಳ ಕಾಲ ನಿರಂತರ ಉಪವಾಸವಿದ್ದು, ನಿಗ್ರಹ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಅವರನ್ನು ದೈವೀ ಭಕ್ತಿ ಹಾಗೂ ಕ್ರಿಯಾಶೀಲನಾಗಿ ಮಾಡುವಲ್ಲಿ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಐಐಟಿಎ ತಾಲೂಕು ಅಧ್ಯಕ್ಷ ಯಾಕೂಬ್ಅಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಪರಂಡಿ, ವೀರೇಶ ಗೋನವಾರ, ಶೇಖರಯ್ಯಸ್ವಾಮಿ, ಸಾಬಣ್ಣ, ಮಲ್ಲಿಕಾರ್ಜುನ ಇದ್ದರು.