ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತುಂಬಿ ಹರಿದಿದೆ ತುಂಗಭದ್ರಾ; ಆತಂಕದಲ್ಲಿ ನದಿಪಾತ್ರದ ಜನತೆ

Rashmi Kasaragodu
Updated On : 30 Jul 2013, 11:36 am

ಸಿಂಧನೂರು: ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ತಾಲೂಕಿನ ನದಿಪಾತ್ರದ ಗ್ರಾಮಗಳ ಜನತೆಯಲ್ಲಿ ಆತಂಕ ಮಡುಗಟ್ಟಿದೆ. ಟಿ.ಬಿ.ಡ್ಯಾಂನಿಂದ 1.5 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಈ ಕಾರಣ ರೈತರ ಹೊಲಗಳಿಗೆ ನದಿ ನೀರು ನುಗ್ಗಿದೆ.
ಮುಕ್ಕುಂದ ಗ್ರಾಮದ ಖಾದರಬಾಷಾ ಗಡ್ಡೆ ಸುತ್ತಲೂ ನೀರು ವ್ಯಾಪಿಸಿಕೊಂಡಿದೆ. ಕೆಂಗಲ್, ದಢೇಸೂಗುರು, ಭೈರೇಶ್ವರಿಕ್ಯಾಂಪ್, ಉಪ್ಪಳ, ಹೆಡಗಿನಾಳ, ಒಳಬಳ್ಳಾರಿ, ಆಯನೂರು, ಚಿಂತಮಾನದೊಡ್ಡಿ, ಪುಲಮೇಶ್ವರದಿನ್ನಿ ಸೇರಿದಂತೆ ಇತರ ಹಳ್ಳಿಗಳ ರೈತರ ನೂರಾರು ಹೆಕ್ಟರ್ ಪ್ರದೇಶಕ್ಕೆ ನದಿಯ ಹಿನ್ನೀರು ನುಗ್ಗಿದೆ. ರೈತರ ಅನೇಕ ಪಂಪಸೆಟ್ಗಳು ಜಲಾವೃತವಾಗಿವೆ.
ಲಕ್ಷ ಕ್ಯುಸೆಕ್ ಅಧಿಕ ನೀರಿ ಹೊರಕ್ಕೆ: ಹಲವು ದಿನಗಳಿಂದ ಮಲೆನಾಡು ವ್ಯಾಪ್ತಿಯಲ್ಲಿ ಭಾರೀ ಮಳೆ ಬೀಳುತ್ತಿರುವುದರಿಂದ ತುಂಗಭದ್ರ ಜಲಾಶಯದ ಒಳಹರಿವು ಹೆಚ್ಚಿದೆ. ಈಗಾಗಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಲಕ್ಷ ಕ್ಯುಸೆಕ್ ಅಧಿಕ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. 2009ರಲ್ಲಿ ಉಂಟಾದ ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದ ತಾಲೂಕಿನ ಹೊಳೆ ದಂಡೆಯ ಬಹುತೇಕ ಹಳ್ಳಿಗಳ ಅನೇಕ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಸ್ಥಳಾಂತರಿಸಲಾಗಿತ್ತು.
ಕೆಲವರು ತಮ್ಮ ಊರುಗಳನ್ನು ಬಿಡದೇ ಪುಲಮೇಶ್ವರದಿನ್ನಿ, ಒಳಬಳ್ಳಾರಿ, ಹೆಡಗಿನಾಳ, ಚಿಂತಮಾನದೊಡ್ಡಿ ಸೇರಿದಂತೆ ಇತರ ಹಳ್ಳಿಗಳಲ್ಲಿ ಸುಮಾರು 10 ಕುಟುಂಬಗಳು ಹಳೇ ಊರುಗಳಲ್ಲಿ ವಾಸಿಸುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮತ್ತಷ್ಟು ಭೀತಿಗೊಳಗಾಗಿದ್ದಾರೆ.
ಮೊದಲ ಬಾರಿಗೆ ನದಿಗೆ ಹೆಚ್ಚಿನ ನೀರು: ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿದು ಬರುತ್ತಿರುವುದು ಒಂದೆಡೆ ಆತಂಕ ಸೃಷ್ಟಿಸಿದರೆ, ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನದಿಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬಂದಿರುವುದು ಕೆಲವರಲ್ಲಿ ಖುಷಿ ತಂದಿದೆ.
ತಾಲೂಕಿನ ತುಂಗಭದ್ರ ನದಿಪಾತ್ರದ ಗ್ರಾಮಗಳಿಗೆ ಸಹಾಯಕ ಆಯುಕ್ತ ಟಿ. ಯೋಗೇಶ, ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಳವಾರ ಭೇಟಿ ನೀಡಿ ಹಳೆ ಊರುಗಳಲ್ಲಿ ವಾಸಿಸುತ್ತಿರುವ ಜನತೆಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದ್ದಾರೆ. ರೈತರು ಯಾವುದೇ ಕಾರಣಕ್ಕೆ ಪಂಪಸೆಟ್ಗಳ ಹತ್ತಿರ ಹೋಗಬಾರದೆಂದು ಈಗಾಗಲೇ ಡಂಗುರ ಹೊಡೆಸಲಾಗಿದೆ. ಯಾವುದೇ ರೀತಿಯ ಆಹಾರ ಇನ್ನಿತರ ಮೂಲ ಅವಶ್ಯಕತೆಗಳ ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲಾಗುವುದು ಎಂದು ತಹಸೀಲ್ದಾರ್ ಕುಮಾರಸ್ವಾಮಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement