ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಡುಗಡ್ಡೆ ನಿವಾಸಿಗಳಿಗೆ ವಸತಿ ಸೌಕರ್ಯ

Rashmi Kasaragodu
Updated On : 30 Jul 2013, 11:36 am

ಲಿಂಗಸ್ಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಮ್ಯಾದರಗಡ್ಡಿ ಹಾಗೂ ಕರಕಲಗಡ್ಡಿ ನಿವಾಸಿಗಳಿಗೆ ತಾಲೂಡಾಳಿತದಿಂದ ಯರಗೋಡಿ ಗ್ರಾಮದಲ್ಲಿ ವಸತಿ ಸೌಕರ್ಯ ಕಲ್ಪಿಸಿಕೊಡಲಾಗುವುದೆಂದು ಸಹಾಯಕ ಆಯುಕ್ತ ಟಿ.ಯೋಗೇಶ್ ಭರವಸೆ ನೀಡಿದರು.
ಸಹಾಯಕ ಆಯುಕ್ತ ಟಿ.ಯೋಗೇಶ, ತಹಸೀಲ್ದಾರ್ ಎನ್.ಬಿ.ಪಾಟೀಲ್ ಹಾಗೂ ತಾಪಂ ಇಒ ವೀರಭದ್ರಪ್ಪ ಅವರು ಯರಗೋಡಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮ್ಯಾದರಗಡ್ಡಿಯ ಮಲ್ಲಪ್ಪ ಮ್ಯಾದರ ಹಾಗೂ ಗ್ರಾಮದ ಮುಖಂಡರೊಂದಿಗೆ ನಡುಗಡ್ಡೆ ನಿವಾಸಿಗಳ ಸಮಸ್ಯೆ ಪರಿಹಾರ  ಕುರಿತು ಸಭೆ ನಡೆಸಿದರು.
ಸ್ಥಳಾಂತರ ನಕಾರಕ್ಕೆ ಕಾರಣವೇನು?: ನಡುಗಡ್ಡೆ ಪ್ರದೇಶದ ಮ್ಯಾದರಗಡ್ಡಿ ಮತ್ತು ಕರಕಲಗಡ್ಡಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತ ಅಲ್ಲಿಯೇ ವಾಸವಾಗಿದ್ದೀರಿ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ತಾಲೂಕಾಡಳಿತ ಮುಂಜಾಗ್ರತಾ ಕ್ರಮ ವಹಿಸಲು ನಡುಗಡ್ಡೆ ನಿವಾಸಿಗಳನ್ನು ಯರಗೋಡಿ ಗ್ರಾಮಕ್ಕೆ ಸ್ಥಳಾಂತರಿಸಿ ಗಂಜಿ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿತ್ತು. ಆದರೆ ಸ್ಥಳಾಂತರಕ್ಕೆ ನಡುಗಡ್ಡೆ ವಾಸಿಗಳು ನಿರಾಕರಿಸುತ್ತಿದ್ದೀರಿ. ಯರಗೋಡಿಯಲ್ಲಿ ಬಂದು ನೆಲೆಸದಿರಲು ಕಾರಣವಾದರೂ ಏನು ಎಂದು  ಸಹಾಯಕ ಆಯುಕ್ತರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾದರಗಡ್ಡಿಯ ಮಲ್ಲಪ್ಪ ಮ್ಯಾದರ, ' ಅಲ್ಲರಿ ಸಹೇಬ್ರಾ.. ನೀವು ಹೇಳಾದು ಖರೇ ಐತ್ರಿ. ಆದ್ರ ಯರಗೋಡಿಗೆ ಬಂದು ನಾವೇನ್ ಮಾಡಾಣ್ರಿ. ಈ ಊರಾಗಾ ಹೊಲ, ಮನಿ ಏನೂ ಇಲ್ಲ. ನಮ್ಮ ಹೊಲ, ಮನಿ, ಬದುಕು, ಬಾಳೇವು ಇರೋದೆಲ್ಲ ಗಡ್ಯಾಗ. ಇಲ್ಲಿ ಬಂದು ನಾವು ಎಲ್ಲಿ ಇರೋದು. ಹೊಲದ ಗತಿ ಏನಾಗುತ್ತ. ಅದಕ್ಕ ಮ್ಯಾದರಗಡ್ಡಿ ಮತ್ತು ಕರಕಲಗಡ್ಯಾಗ ನಮ್ಮ 30 ಎಕ್ರೆ ಹೊಲ ಸರ್ಕಾರದೋರು ತೆಗೊಂಡು ನಮಗ ಯರಗೋಡ್ಯಾಗ ಭೂಮಿ ಖರೀದಿ ಮಾಡ್ರಿ, ಇರೋಕೆ ಮನೆ ಮಾಡಿ ಕೊಟ್ರ ನಮ್ಗ ಅನುಕೂಲ ಆಗ್ತೈತಿ. ನಮ್ಮಕ್ಳು ಶಾಲಿಗೆ ಹೋಗಾಕೂ ಅನುಕೂಲ ಆಗ್ತೈತಿ. ನೋಡ್ರಿ ನೀವು ಯಾವ ರೀತಿ ಅನುಕೂಲ ಮಾಡಿಕೊಡ್ತೀರಿ ಅಂತ ಯೋಚನೆ ಮಾಡ್ರಿ' ಎಂದು ತಮಗಾಗುವ ಸಮಸ್ಯೆ ಬಿಚ್ಚಿಟ್ಟನು.
ಇದಕ್ಕೆ ಸಹಾಯಕ ಆಯುಕ್ತ ಟಿ.ಯೋಗೇಶ ಮಾತನಾಡಿ, ಯರಗೋಡಿ ಗ್ರಾಮದಲ್ಲಿ ಯಾರಾದರೂ ಭೂಮಿ ನೀಡಲು ಮುಂದೆ ಬಂದರೆ ಖರೀದಿಸಿ ಅದರಲ್ಲಿ ನಡುಗಡ್ಡೆ ನಿವಾಸಿಗಳಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬಹುದು.
 ಆದರೆ ನಡುಗಡ್ಡೆಯಲ್ಲಿನ ಭೂಮಿ ಸರ್ಕಾರದ ವಶಕ್ಕೆ ಪಡೆದು ಯರಗೋಡಿಯಲ್ಲಿ ಭೂಮಿ ಕೊಡಿಸುವುದು ತಾಲೂಕು ಆಡಳಿತ ವ್ಯಾಪ್ತಿಗೆ ಬರುವುದಿಲ್ಲ. ನಿಮ್ಮ ಬೇಡಿಕೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
 ಅಲ್ಲದೆ ಯರಗೋಡಿಯಿಂದ ಮ್ಯಾದರಗಡ್ಡಿ ಮತ್ತು ಕರಕಲಗಡ್ಡಿಯ ಜಮೀನಿಗೆ ಕೃಷಿ ಕಾರ್ಯಕ್ಕೆ ತರಳಲು ಅನುಕೂಲವಾಗುವಂತೆ ತೂಗು ಸೇತುವೆ ನಿರ್ಮಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ನಡುಗಡ್ಡೆ ನಿವಾಸಿಗಳು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದಾಗ, ನಡುಗಡ್ಡೆ ನಿವಾಸಿ ಮಲ್ಲಪ್ಪ ಮ್ಯಾದರ ಹಾಗೂ ಯರಗೋಡಿ ಗ್ರಾಮದ ಮುಖಂಡರಾದ ಬಸಣ್ಣ ದಳಪತಿ, ಅಮರಪ್ಪ ಹಟ್ಟಿ, ಯಲ್ಲಪ್ಪ ಹಾಲಬಾವಿ, ಯಲ್ಲಪ್ಪ ಸೇರಿದಂತೆ ಸಮ್ಮತಿ ಸೂಚಿಸಿದರು. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಪ್ರಯುಕ್ತ ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರು ಪ್ರವಾಹಕ್ಕೆ ಸಿಲುಕದಂತೆ ಮುಂಜಾಗ್ರತೆ ವಹಿಸಿ ಯರಗೋಡಿ ಗ್ರಾಮದ ಸುರಕ್ಷಿತ ಸ್ಥಳಕ್ಕೆ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಜಿಲ್ಲಾ ಮತ್ತು ತಾಲೂಕು ಆಡಳಿತ ಮುಂದಾಗಿತ್ತು. ಜು. 26ರಂದು ರಕ್ಷಣಾ ಬೋಟ್ ಸಮೇತ ಅಧಿಕಾರಿಗಳು ನಡುಗಡ್ಡೆ ನಿವಾಸಿಗಳನ್ನು ತೆರಳಿದಾಗ ಸುಮಾರು 30 ಜನರಲ್ಲಿ ಕೇವಲ ಮೂವರನ್ನು ಕರೆ ತರುವಲ್ಲಿ ಯಶಸ್ವಿಯಾಗಿದ್ದರು.
'ಕನ್ನಡಪ್ರಭ' ವರದಿ ಮಾಡಿತ್ತು: ಯರಗೋಡಿ ಗ್ರಾಮದಲ್ಲಿ ತಂಗಿದ್ದ ಮ್ಯಾದರಗಡ್ಡಿಯ ಮಲ್ಲಪ್ಪ ಮ್ಯಾದರ ಅವರನ್ನು ಜು.27ರಂದು ಪತ್ರಿಕೆ ಭೇಟಿ ಮಾಡಿ, ಅವರ ಸಮಸ್ಯೆ, ಬೇಡಿಕೆಗಳು ಹಾಗೂ ಯರಗೋಡಿ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ನಿರಾಕರಣೆಗೆ ಕಾರಣವೇನು ಎಂಬುದರ ಮಾಹಿತಿ ಪಡೆದು 'ಕನ್ನಡಪ್ರಭ' ಜು.28ರಂದು 'ಸ್ಥಳಾಂತರಕ್ಕೆ ನಡುಗಡ್ಡೆ ಗ್ರಾಮಸ್ಥರ ನಿರಾಕರಣೆ, ಶಾಶ್ವತ ಪರಿಹಾರಕ್ಕೆ ಒತ್ತಾಯ' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement