ಮನುಷ್ಯನಿಗೆ ಆರೋಗ್ಯವೇ ಸಕಲ ಸಂಪತ್ತು
ಸುರಪುರ: ಹಣ, ಅಧಿಕಾರ ಮತ್ತು ಅಂತಸ್ತು ಕಳೆದುಕೊಂಡರೆ ಮರಳಿ ಗಳಿಸಬಹುದು. ಆದರೆ ಆರೋಗ್ಯ ಹಾಳು ಮಾಡಿಕೊಂಡರೆ ಗಳಿಸಲು ಸಾಧ್ಯವಿಲ್ಲ. ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಮತ್ತು ಸಕಲ ಸಂಪತ್ತು ಎಂದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಹೇಳಿದರು.
ಇಲ್ಲಿಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಾಯಚೂರಿನ ಸ್ವಯಂ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಇಂದಿನ ಕಲುಷಿತ ಆಹಾರ ಪದಾರ್ಥಗಳಿಂದ ಹಾಗೂ ದುಶ್ಚಟಗಳಿಂದ ಆರೋಗ್ಯ ಹಾಳಾಗುತ್ತಿದೆ. ಕಾರಣ ದುಶ್ಚಟಗಳಿಂದ ದೂರವಿದ್ದು ಸಾಧ್ಯವಾದ ಮಟ್ಟಿಗೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಇದರಿಂದ ಆರೋಗ್ಯ ಭಾಗ್ಯ ವೃದ್ಧಿಯಾಗುತ್ತದೆ. ಸರ್ಕಾರ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಜನತೆಗೆ ಸಹಕಾರಿಯಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಮಾನಸಿಕ ರೋಗ ತಜ್ಞ ಡಾ. ಅಜಯಕುಮಾರ, ಎಲುಬು ಮತ್ತು ಕೀಲು ತಜ್ಞ ಡಾ. ವಿನಯ ಪಾಟೀಲ್, ನೇತ್ರ ತಜ್ಞ ಡಾ. ಎಂ.ನಂದ್ಯಾಳ ಮತ್ತು ಮಕ್ಕಳ ತಜ್ಞ ಡಾ. ದೇವಿದಾಸ ಪಾಟೀಲ್ ಶಿಬಿರದಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಎಚ್, ಡಾ. ಹರ್ಷವರ್ಧನ, ಡಾ. ಇಮ್ತಿಯಾಜ್ ಹುಸೇನ್, ಪ್ರಭುರಾಜ, ಸಂಗಪ್ಪ ಚೆಟ್ಟಿ ಇದ್ದರು.
ಆರೋಗ್ಯ ತಪಾಸಣೆ: ಇದೇ ವೇಳೆ 170 ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಉಚಿತ ಆರೋಗ್ಯ ತಪಾಸಣೆ ಇದ್ದರಿಂದ ತಾಲೂಕಿನ ಗ್ರಾಮೀಣ ಪ್ರದೇಶದಿಂದ ಹೆಚ್ಚು ಜನರು ಶಿಬಿರಕ್ಕೆ ಆಗಮಿಸಿದ್ದರು. ಇದರಿಂದ ಕೆಲ ಗಂಟೆಗಳವರೆಗೆ ನೂಕುನುಗ್ಗಲು ಏರ್ಪಟ್ಟತು. ರೋಗಿಗಳನ್ನು ಸರದಿ ಸಾಲಿನಲ್ಲಿ ನಿಲ್ಲಿಸಲು ವೈದ್ಯರು ಮತ್ತು ಸಿಬ್ಬಂದಿ ಪರದಾಡುವಂತಾಯಿತು.
ತಾಲೂಕು ಆರೋಗ್ಯಾಧಿಕಾರಿ ಆರ್.ವಿ. ನಾಯಕ ರೋಗಿಗಳ ಬಳಿ ಬಂದು ದಯವಿಟ್ಟು ಸರದಿ ಸಾಲಿನಲ್ಲಿ ನಿಲ್ಲಿ ಪರೀಕ್ಷೆಗೆ ಸಹಕರಿಸಿ ಎಂದು ಮನವಿ ಮಾಡಿ ಅವರ ಮನವೊಲಿಸಿದರು. ನಂತರ ರೋಗಿಗಳು ಸರದಿ ಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಂಡರು.