ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹತ್ತಿಗೂಡರ- ಕೊಳ್ಳೂರ ರಸ್ತೆಗೆಂದು ದುರಸ್ತಿ ಭಾಗ್ಯ?

Rashmi Kasaragodu
Updated On : 30 Jul 2013, 11:36 am

ಕ.ಪ್ರ. ವಾರ್ತೆ ೤ ಶಹಾಪುರ ೤ ಜು.26
ಕೋಟ್ಯಂತರ ರುಪಾಯಿ ಖರ್ಚು ಮಾಡಿ ಸಾರ್ವಜನಿಕರಿಗಾಗಿ ಅನೇಕ ರಸ್ತೆ ಕಾಮಗಾರಿ ಮಾಡಲಾಗುತ್ತದೆ. ಆದರೆ ರಸ್ತೆಗಳು ಗುಣಮಟ್ಟ ಕಳೆದುಕೊಂಡು ಕೆಲವೇ ದಿನಗಳಲ್ಲಿ ಮತ್ತೆ ಹದಗೆಡುತ್ತಿವೆ ಎನ್ನುವುದಕ್ಕೆ ಇಲ್ಲಿನ ಹತ್ತಿಗೂಡೂರ- ದೇವದುರ್ಗ ರಸ್ತೆಯೇ ಪ್ರತ್ಯಕ್ಷ ಸಾಕ್ಷಿ.
ಈ ಪ್ರದೇಶದಲ್ಲಿ ಬತ್ತ ಬೆಳೆಯುತ್ತಿರುವುದರಿಂದ ಮಳೆಗೆ ರಸ್ತೆ ಯಾವುದು, ಬತ್ತದ ಕೆಸರುಗದ್ದೆ ಯಾವುದು ಎಂಬುದೂ ಗೊತ್ತಾಗದಂತಾಗಿದೆ. ಇದರಿಂದ ಬಸ್ಸು, ಲಾರಿ ಹಾಗೂ ಬೈಕ್ ಸವಾರರು ಸರ್ಕಸ್ ಮಾಡುತ್ತ ತೆರಳಬೇಕಾಗಿದೆ.
ಸಂಚಾರಕ್ಕೆ ತೊಂದರೆ: ಹತ್ತಿಗುಡೂರ ಕ್ರಾಸ್ದಿಂದ ಕೊಳ್ಳೂರಿಗೆ ಹೋಗುವ ರಸ್ತೆ ಕೊಚ್ಚೆ ಗುಂಡಿಯಂತಾಗಿದ್ದು, ವಾಹನ ಸವಾರರು, ಪಾದಾಚಾರಿಗಳು, ಶಾಲಾ ವಿದ್ಯಾರ್ಥಿಗಳು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಹದಗೆಟ್ಟರೂ ಅನೇಕ ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯದಿರುವುದು ದುರಂತದ ಸಂಗತಿ.
ತಾಲೂಕಿನಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಕೊಳ್ಳೂರ, ಮುನಮುಟಗಿ, ಕಾಡಂಗೇರಾ, ಹೈಯಾಳ, ಕೊಂಕಲ್, ತುಮಕೂರು, ಅನಕಸೂಗುರ, ನಂದೆಹಳ್ಳಿ, ಬಸಂತಪುರ ಮುಂತಾದ ಹಳ್ಳಿಗಳ ರಸ್ತೆಗಳು ಕಳಪೆ ಕಾಮಗಾರಿಯಿಂದ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ಬಿರುಕು ಬಿಟ್ಟು ರಸ್ತೆಗಳ ಮಧ್ಯೆ ತಗ್ಗುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಸಾರ್ವಜನಿಕರು ಹರಸಾಹಸ ಪಟ್ಟು ಸಂಚರಿಸುವಂತಾಗಿದೆ.
ಜನಪ್ರತಿನಿಧಿಗಳು ಕಣ್ದೆರೆಯಲಿ: ಕೊಚ್ಚೆಗುಂಡಿಗಳಾದ ರಸ್ತೆಗಳಿಂದ ಇಲ್ಲಿನ ವಾಹನ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಧಕ್ಕೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇನ್ನಾದರೂ ಶಾಶ್ವತ ಪರಿಹಾರ ಒದಗಿಸಿಕೊಡುವರೇ ಎಂದು ಕಾದು ನೋಡಬೇಕು.
ಹತ್ತಿಗುಡೂರು ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದುಬುದು ಜನರ ಆಗ್ರಹ.
ಮಳೆ ಬಂದರೆ ಹತ್ತಿಗುಡೂರು ರಸ್ತೆ ಕೆಸರು ಗದ್ದೆಯಾಗುತ್ತವೆ. ಇದರಿಂದ ಬೈಕ್ ಸವಾರರು ಕೆಸರಿನಲ್ಲಿ ಸ್ಕಿಡ್ಡಾಗಿ ಬೀಳುತ್ತಿದ್ದಾರೆ.
 ಆದ್ದರಿಂದ ಅಧಿಕಾರಿಗಳು ಹತ್ತಿಗುಡೂರು ಕ್ರಾಸ್ದಿಂದ ಕೊಳ್ಳೂರ ಗ್ರಾಮದ ರಸ್ತೆ ಕಾಮಗಾರಿ ಬೇಗನೆ ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement