11 ಕಳವು ಪ್ರಕರಣ- ಲಕ್ಷಾಂತರ ರು. ಜಪ್ತಿ: ಎಸ್ಪಿ
ವಾರಸುದಾರರಿಗೆ ಕಳವಾದ ಆಸ್ತಿ ಹಸ್ತಾಂತರ ಇಸ್ಪೀಟ್ ಜೂಜಾಟ; 482 ಜನ ಬಂಧನ
ಕನ್ನಡಪ್ರಭ ವಾರ್ತೆ ರಾಯಚೂರು ಜು.30
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಏಪ್ರಿಲ್ನಿಂದ ಜೂನ್ ಅಂತ್ಯದವರೆಗೆ 11 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ್ದು, ಒಟ್ಟು 10,83,140 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಳ್ಳಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 36 ಕಳವಿನ ಪ್ರಕರಣಗಳಲ್ಲಿ ಒಟ್ಟು 35,95,300 ದೋಚಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಆರೋಪಿಗಳಿಂದ 10,83,140 ಮೊತ್ತದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅದರಲ್ಲಿ 65,400 ಮೌಲ್ಯದ ಬೆಳ್ಳಿ, ಚಿನ್ನಾಭರಣಗಳು, 4 ಬೈಕ್, 4 ಸಿಲಿಂಡರ್, 8 ಮೊಬೈಲ್ ಹಾಗೂ 1 ವಾಟರ್ ಪಂಪ್ಸೆಟ್ ಮತ್ತು ನಗದು 9,02,500 ಜಪ್ತಿ ಮಾಡಲಾಗಿದೆ ಎಂದರು.
482 ಆರೋಪಿತರಲ್ಲಿ 57 ಜನರಿಗೆ ಶಿಕ್ಷೆ: 2013ರ ಏಪ್ರಿಲ್ಗಿಂತ ಪೂರ್ವದಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, 40 ಸಾವಿರ ಬೆಲೆಯ ಒಂದು ಬೈಕ್, 12 ಮೊಬೈಲ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಮತ್ತೆರಡು ಕೇಸ್ಗಳಲ್ಲಿ 55 ಸಾವಿರ ಮೌಲ್ಯದ 2 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಮಟಕಾ ಜೂಜಿನ 71 ಕೇಸ್ಗಳಲ್ಲಿ 1,04,627 ಜಪ್ತಿ ಮಾಡಿದ್ದು, 104 ಆರೋಪಿಗಳನ್ನು ಬಂಧಿಸಲಾಗಿದೆ. 79 ಜನರಿಗೆ ಶಿಕ್ಷೆಯಾಗಿದೆ. ಮಟಕಾಕ್ಕೆ ಸಂಬಂಧಿಸಿ 25 ಜನರ ವಿಚಾರಣೆ ನಡೆದಿದೆ. ಇಸ್ಪೀಟ್ ಜೂಜಾಟಕ್ಕೆ ಸಂಬಂಧಿಸಿ 12,20,033 ಜಪ್ತಿ ಮಾಡಿದ್ದು, 482 ಜನರನ್ನು ಬಂಧಿಸಲಾಗಿದೆ. ಅದರಲ್ಲಿ 57 ಜನರಿಗೆ ಶಿಕ್ಷೆಯಾಗಿದೆ ಎಂದು ವಿವರಿಸಿದರು.
ಸಂಚಾರ ಸುರಕ್ಷತೆಗೆ ಕ್ರಮ: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಡಿ 5 ಕೇಸ್ ದಾಖಲಿಸಿ 33,240 ಜಪ್ತಿ ಮಾಡಲಾಗಿದೆ. 21 ಜನರನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದ ಅವರು, ಅಬಕಾರಿ ಕಾಯ್ದೆಯಡಿಯಲ್ಲಿ 140 ಕೇಸ್ ದಾಖಲಿಸಿ ಒಟ್ಟು 90,9587 ವಶಪಡಿಸಿಕೊಂಡು 215 ಜನರನ್ನು ಬಂಧಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ರಸ್ತೆ ಸಂಚಾರ ಸುರಕ್ಷತೆಗೆ ಇಂಟರ್ಸೆಪ್ಟರ್ ವಾಹನದ ಬಳಕೆ ಮಾಡಲಾಗುತ್ತಿದೆ. ಕಳ್ಳತನ ತಡೆಗಟ್ಟಲು 'ಗುಡ್ ಮಾರ್ನಿಂಗ್ ಬೀಟ್' ಹಗಲು ಗಸ್ತು, ರಾತ್ರಿ ಗಸ್ತು, ದ್ವಿಚಕ್ರ ವಾಹನಗಳ ತಪಾಸಣೆ ಹಾಗೂ ಹೈವೇ ಪೆಟ್ರೋಲಿಂಗ್ ಸಹ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯ ಬ್ಯಾಂಕ್, ಪೆಟ್ರೋಲ್ ಬಂಕ್, ದೇವಸ್ಥಾನ, ಮಾರ್ಕೇಟ್ ಮತ್ತಿತರೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸ್ವತ್ತಿನ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿ ಆರೋಪಿತರ ಪತ್ತೆ ಕುರಿತು ನಿರಂತರ ಶ್ರಮಿಸಲಾಗುತ್ತಿದೆ. ಇ-ಬೀಟ್ ಪದ್ಧತಿ ಅಡಿ ಕರ್ತವ್ಯವನ್ನು ನಿರಂತರವಾಗಿ ಜಾರಿಯಲ್ಲಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಡಾ. ದಿವ್ಯಾ ಗೋಪಿನಾಥ್ ಸೇರಿ ಅನೇಕ ಅಧಿಕಾರಿಗಳಿದ್ದರು.