ಇಂದು ಐಕ್ಯತಾ ಸಮಾವೇಶ
ರಾಯಚೂರು: ತಾಲೂಕಿನ ಗಾಣದಾಳ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿನಿಂದ ಉಂಟಾಗಿರುವ ಅಶಾಂತಿ ದೂರ ಮಾಡಲು ಜು.31ರಂದು ಗ್ರಾಮದಲ್ಲಿ ವಾಲ್ಮೀಕಿ ಹಾಗೂ ದಲಿತ ಜನಾಂಗದ ಸಾಮರಸ್ಯದ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಒಕ್ಕೂಟದ ಮುಖಂಡರಾದ ಎಂ. ಈರಣ್ಣ ಹಾಗೂ ಹೇಮರಾಜ್ ಅಸ್ಕಿಹಾಳ್, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಗ್ರಾಮದಲ್ಲಿ ಸಾಮರಸ್ಯ ಕಾಪಾಡಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಜು.31 ರ ಸಂಜೆ 5ಕ್ಕೆ ಗ್ರಾಮದಲ್ಲಿ ಜನಜಾಗೃತಿ ಸಭೆ ಮತ್ತು ಬೃಹತ್ ಬಹಿರಂಗ ಸಭೆಯನ್ನು ದಲಿತ ಪ್ರಗತಿ ಪರ ಸಂಘಟನೆಗಳು ಹಮ್ಮಿಕೊಂಡಿದ್ದು, ಅಧ್ಯಕ್ಷತೆಯನ್ನು ದಾನಪ್ಪ ನಿಲೋಗಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್. ಮಾನಸಯ್ಯ, ಬಾಲಸ್ವಾಮಿ ಕೊಡ್ಲಿ, ರಾಜಾ ಪಾಂಡುರಂಗ ನಾಯಕ ವಕೀಲರು, ಪದ್ಮವರ್ಧನ್ ವಕೀಲರು, ರವೀಂದ್ರನಾಥ ಪಟ್ಟಿ, ಅಂಬಣ್ಣ ಅರೋಲಿಕರ್, ಎಂ.ಆರ್. ಭೇರಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ಪುರಸಭೆ ಮೀಸಲಾತಿ ಪ್ರಕಟಿಸಲು ಆಗ್ರಹ
ದೇವದುರ್ಗ: ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುವಂತೆ ಪುರಸಭೆಯ 17 ಜನ ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ. ಈ ಕುರಿತು ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಈಗಾಗಲೇ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಸದಸ್ಯರ ಆಯ್ಕೆ ನಡೆದು ಅನೇಕ ತಿಂಗಳಾದರೂ ಕಾಂಗ್ರೆಸ್ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿಲ್ಲ ಎಂದು ಆರೋಪಿಸಿದ್ದಾರೆ. ಆಡಳಿತ ಮಂಡಳಿ ಅಸ್ತಿತ್ವದಲ್ಲಿಲ್ಲದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಗೆ ಅಭಿವೃದ್ಧಿಯ ವಿಚಾರದಲ್ಲಿ ಸ್ಪಂದಿಸದಿರುವುದರಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದ್ದಾರೆ. ಬಿಜೆಪಿ ಸದಸ್ಯರಾದ ವೆಂಕಟೇಶ ಸೋಮಕಾರ, ಶ್ರೀನಿವಾಸ ಅಬಕಾರಿ, ಫಕ್ರೂದ್ದೀನ್ ಗೌರಂಪೇಟ್, ಮಹ್ಮದ್ ಯೂನೂಸ್ ಶಹಾಪುರಿ, ಹನಮೇಶ ನಾಯಕ, ಅಲಿಂ ಪಾಶಾ, ಚಂದ್ರಶೇಖರ ಚಲುವಾದಿ, ನಾಗಪ್ಪ ಉಪ್ಪಾರ ಇನ್ನಿತರರು ಒತ್ತಾಯಿಸಿದ್ದಾರೆ.