ಜನತೆಯಲ್ಲಿ ತಳಮಳ
ಸಿಂಧನೂರು: ತಾಲೂಕಿನಲ್ಲಿ ಹರಿವ ತುಂಗಭದ್ರಾ ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ನದಿಗೆ ನೀರು ಹರಿಬಿಡಲಾಗಿದೆ. ಇದರಿಂದ ನದಿ ಪಾತ್ರದ ಹಳ್ಳಿಗರಲ್ಲಿ ತೀವ್ರ ಆತಂಕ ಎದುರಾಗಿದೆ.
ಕಳೆದ ವಾರದಿಂದ ಮಲೆನಾಡು ವ್ಯಾಪ್ತಿಯಲ್ಲಿ ಭಾರೀ ಮಳೆ ಬೀಳುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಸತತವಾಗಿ 1.5 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿ ಬಿಡಲಾಗಿದೆ. ನದಿಗೆ ನೀರು ಹರಿಸುತ್ತಿರುವ ಸುದ್ದಿ ತಿಳಿದ ರೈತರು ಮುಂಜಾಗ್ರತಾ ಕ್ರಮವಾಗಿ ಪಂಪ್ಸೆಟ್ಗಳ ಸ್ಥಳಾಂತರಕ್ಕೆ ಮುಂದಾಗುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಟ್ಟಿದ್ದರಿಂದಾಗಿ ಮುಕ್ಕುಂದ ಗ್ರಾಮದ ಪವಿತ್ರಗಡ್ಡೆ ಖಾದರಬಾಷಾ ಗಡ್ಡೆ ದೇವಸ್ಥಾನ ಸುತ್ತಲೂ ನೀರು ವ್ಯಾಪಿಸಿಕೊಂಡು ಮುಳುಗಿದೆ.
ಹೊಲಗಳಿಗೆ ನುಗ್ಗಿದ ನೀರು: ನೀರಿನಿಂದಾಗಿ ದೇವಸ್ಥಾನ ನಡುಗಡ್ಡೆಯಾದಂತಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು ನದಿ ದಂಡೆಯ ಹೊಲಗಳಿಗೆ ನೀರು ನುಗ್ಗಿದೆ. ಕೆಂಗಲ್, ದಢೇಸೂಗುರು, ಭೈರೇಶ್ವರಿಕ್ಯಾಂಪ್, ಉಪ್ಪಳ, ಹೆಡಗಿನಾಳ, ಒಳಬಳ್ಳಾರಿ, ಮುಕ್ಕುಂದ ಸೇರಿದಂತೆ ನದಿ ಪಕ್ಕದಲ್ಲೇ ಇರುವ ಹೊಲಗಳಿಗೆ ನೀರು ನುಗ್ಗಿದ ಪರಿಣಾಮ ನಾಟಿ ಮಾಡಿದ ಬತ್ತ ನೀರು ಪಾಲಾಗಿದೆ. ಇತರ ಹಳ್ಳಿಗಳ ರೈತರ ನೂರಾರು ಹೆಕ್ಟೇರ್ ಪ್ರದೇಶಕ್ಕೆ ನದಿಯ ಹಿನ್ನೀರು ನುಗ್ಗಿದ್ದು ರೈತರ ಪಂಪ್ಸೆಟ್ಗಳು ಸಂಪೂರ್ಣ ಜಲಾವೃತವಾಗಿವೆ. ಬಿತ್ತಿದ ಬೆಳೆಯೂ ಹಾಳಾಗಿದೆ.