ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಲಲಿತಕಲೆಗಳು ಅವಶ್ಯ: ಜಾಲಿಹಾಳ

Rashmi Kasaragodu
Updated On : 31 Jul 2013, 11:32 am

ಆ.1ರಂದು ಚಿಣ್ಣರ ಚಿತ್ರ ಜಾತ್ರೆ, ಕಾರ್ಯಾಗಾರ


ಕನ್ನಡಪ್ರಭ ವಾರ್ತೆ   ರಾಯಚೂರು   ಜು.30
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಲಲಿತಕಲೆಗಳ ಬಗ್ಗೆ ಜ್ಞಾನ ಮೂಡಿಸುವುದು ತೀರಾ ಅವಶ್ಯಕ. ಈ ಹಿನ್ನೆಲೆಯಲ್ಲಿ ಆ.1 ರಂದು ಚಿಣ್ಣರ ಚಿತ್ರಜಾತ್ರೆ ಹಾಗೂ ಆ.2ರಿಂದ 3ರವರೆಗೆ ಚಿತ್ರಕಲೆ ಶಿಕ್ಷಕರ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ರಾಜ್ಯ ಚಿತ್ರಕಲೆ ಶಿಕ್ಷಕರ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಬಲರಾಮ ಜಾಲಿಹಾಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ರಂಗಮಂದಿರದಲ್ಲಿ ಆ.1ರಂದು ಚಿಣ್ಣರ ಚಿತ್ರ ಜಾತ್ರೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಿಡಿಪಿಐ ಪರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಬಿಇಒ ಮಲ್ಲಿಕಾರ್ಜುನ, ದೇವೇಂದ್ರಪ್ಪ, ಹನುಮಂತಪ್ಪ ಗವಾಯಿ, ಹೀರಾಬಾಯಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಅದೇ ದಿನ ಸಂಜೆ 4ಕ್ಕೆ ಚಿತ್ರಕಲಾ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಸಮಾರಂಭ ಆಯೋಜಿಸಿದ್ದು, ಶಾಸಕ ಡಾ. ಶಿವರಾಜ್ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಆ.2 ಮತ್ತು 3ರಂದು ನಗರದ ವಿದ್ಯಾಭಾರತಿ ಶಾಲೆಯಲ್ಲಿ ಚಿತ್ರಕಲೆ ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಿದ್ದು, ಚಿತ್ರಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಹೇಳಿದರು.
ಯಾಂತ್ರಿಕ ಬದುಕಿನಲ್ಲಿ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಕುಂದುತ್ತಿದೆ. ಮಕ್ಕಳ ಜ್ಞಾನಮಟ್ಟಕ್ಕೆ ಇತಿಮಿತಿಗಳನ್ನು ರೂಪಿಸುವ ಮೂಲಕ ಅವರ ಸರ್ವಾಂಗೀಣ ಪ್ರಗತಿಗೆ ಅಡ್ಡಿಯಾಗಿದೆ. ಮಕ್ಕಳಿಗೆ ಆಸಕ್ತಿಯಿಲ್ಲದ ವಿಷಯಗಳನ್ನು ಒತ್ತಾಯಪೂರ್ವಕವಾಗಿ ಕಲಿಸುವ ಕಾರ್ಯ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆ ನಗರದಲ್ಲಿ ಆ.1 ರಂದು ಮಕ್ಕಳಿಗೆ ಚಿಣ್ಣರ ಚಿತ್ರಜಾತ್ರೆ ಆಯೋಜಿಸಿದ್ದು, ಅದೇ ರೀತಿ ಚಿತ್ರಕಲಾ ಶಿಕ್ಷಕರಲ್ಲಿನ ಪ್ರತಿಭೆ ಅನಾವರಣಕ್ಕೆ ಆ.2 ಮತ್ತು 3 ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕಾರ್ಯಾಗಾರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವಿ.ಜಿ. ಅಂದಾನಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಚಿತ್ರಕಲೆಯ ಬೋಧನೆಯಲ್ಲಿಯೂ ಪಠ್ಯಕ್ರಮ ಅನುಸರಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬೋಧಿಸುವ ಕಲೆಯ ಬಗ್ಗೆ ಎ.ಪಿ. ಮುಧೋಳ ಅವರು ಚಿತ್ರಕಲಾ ಶಿಕ್ಷಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಅನುಪಯುಕ್ತ ವಸ್ತುಗಳಿಂದ ಕಲಾಕೃತಿ ನಿರ್ಮಾಣ ಮಾಡುವ ಕಲೆಯನ್ನು ಗುಂಡಪ್ಪ ಗೌಡಗೋಳ ಅವರು ತಿಳಿಸಿಕೊಡಲಿದ್ದಾರೆಂದು ಹೇಳಿದರು.
ಈ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಗೂ ಚಿತ್ರಕಲಾ ಶಿಕ್ಷಕರು ಪಾಲ್ಗೊಂಡು ಕಲೆಯನ್ನು ಉಳಿಸಿ ಬೆಳೆಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಚ್.ಎಚ್. ಮ್ಯಾದಾರ್, ಪಿ.ಎನ್. ಕುಮಾರ್, ಜಾನ್ ಮತ್ತಿತರರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement