ಎಂಪಿಸಿಎಲ್ ಕಾರ್ಮಿಕರ ಧರಣಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.31
ಮೈಸೂರು ಪೆಟ್ರೋ ಕೆಮಿಕಲ್ಸ್ ಕಾರ್ಖಾನೆಯ ಪುನಾರಂಭಕ್ಕೆ ಒತ್ತಾಯಿಸಿ ನೂರಾರು ಕಾರ್ಮಿಕರು ನಗರದಲ್ಲಿ ಬುಧವಾರ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಂಪನಿ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿದ ನಂತರ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಕಾರ್ಮಿಕ ನಾಯಕರು, 1973ರಿಂದ ಇದುವರೆಗೆ ಸಾವಿರಾರು ಕೋಟಿ ಲಾಭ ಕಂಡಿರುವ ಎಂಪಿಸಿಎಲ್ ಕಾರ್ಖಾನೆಯನ್ನು ಆಡಳಿತ ಮಂಡಳಿಯು ಯಾವುದೇ ಮುನ್ಸೂಚನೆ ನೀಡದೇ ಮುಚ್ಚಿರುವುದು ಕಾರ್ಮಿಕ ವಿರೋಧಿ ನೀತಿ ಸ್ಪಷ್ಟಪಡಿಸಿದೆ ಎಂದು ಟೀಕಿಸಿದರು.
ಮಾಹಿತಿ ನೀಡದೆ ಮುಚ್ಚಿದ ಕಾರ್ಖಾನೆ: ಎಂಪಿಸಿಎಲ್ ಕಾರ್ಖಾನೆಯು ಲಾಭದಲ್ಲಿ ಸಾಗಿದ್ದರಿಂದಲೇ ಬಂದ ಲಾಭದಲ್ಲಿ ಮಹಾರಾಷ್ಟ್ರದಲ್ಲಿ ಕಂಪನಿಯ ಆಡಳಿತವು ಮೂರು ಕಂಪನಿಗಳನ್ನು ಸ್ಥಾಪಿಸಿದೆ. ಆದರೆ ಕಾನೂನು ಬಾಹಿರವಾಗಿ ಕಾರ್ಖಾನೆಯ ಕಾರ್ಮಿಕರಿಗೆ ಮಾಹಿತಿ ನೀಡದೇ ಮುಚ್ಚಲಾಗಿದೆ ಎಂದು ಆರೋಪಿಸಿದರು.
ಸ್ಥಳೀಯರು ಈ ಕಾರ್ಖಾನೆಗೆ ಜಮೀನು ನೀಡುವ ವೇಳೆ ಉದ್ಯೋಗ ಮತ್ತು ಬದುಕಿನ ಭದ್ರತೆಯ ಕನಸು ಕಂಡಿದ್ದರು. ಆದರೆ ಕೇವಲ 40 ವರ್ಷಗಳಲ್ಲಿ ಕಂಪನಿಯು ಮುಚ್ಚಿದೆ. ಕೆಲವೇ ಕೆಲ ಕಾರ್ಮಿಕರಿಗೆ ಪರಿಹಾರ ನೀಡಿ ನಿವೃತ್ತಿ ಪತ್ರ ಪಡೆದ ಆಡಳಿತ ವರ್ಗವು ಕಂಪನಿ ಮುಚ್ಚಿದೆ. ಆ ಮೂಲಕ ಕಾರ್ಮಿಕರ ಕುಟುಂಬಗಳು ಬೀದಿಗೆ ಬಂದಿವೆ ಎಂದು ದೂರಿದರು.
ನಿಯಮಗಳ ಉಲ್ಲಂಘನೆ: ಸದ್ಯ ಕಾರ್ಖಾನೆಯನ್ನು ಮುಚ್ಚಿರುವ ಕಂಪನಿಯ ಆಡಳಿತ ಮಂಡಳಿಯು ಕಡಿಮೆ ಕೂಲಿ ನೀಡಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡು ಕಂಪನಿ ನಿರ್ವಹಿಸುವ ಹುನ್ನಾರ ನಡೆಸಿದೆ. ಕಾನೂನಿನಂತೆ ರೋಗಗ್ರಸ್ತ, ಕಾರ್ಖಾನೆಗೆ ಉತ್ಪಾದನೆ ಕಚ್ಚಾ ಸಾಮಗ್ರಿ ಕೊರತೆಯಾದರೆ ಮಾತ್ರ ಕಾರ್ಮಿಕರಿಗೆ ನಷ್ಟ ಪರಿಹಾರ ನೀಡಿ ಕಂಪನಿ ಮುಚ್ಚಬಹುದು. ಆದರೆ ಎಂಪಿಸಿಎಲ್ ಸಂಸ್ಥೆಯ ಆಡಳಿತವು ಇಂಥ ಯಾವುದೇ ಕಾರಣವಿಲ್ಲದಿದ್ದರೂ ಕೆಲ ಕಾರ್ಮಿಕರಿಗೆ ನಷ್ಟ ಪರಿಹಾರ ಎಂದು ಹೇಳಿ ಹಣ ನೀಡಿ ಕಾರ್ಖಾನೆ ಮುಚ್ಚಿದೆ. ಇದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಕಾರ್ಮಿಕರ ಭವಿಷ್ಯ ಅತಂತ್ರ: ಕಂಪನಿಯ ಕಾರ್ಮಿಕರ ಹೋರಾಟದ ಫಲವಾಗಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಿದ್ದು, ಸಭೆ ವೇಳೆ ಕಂಪನಿಯ ಅಧಿಕಾರಿಗಳು ಕಂಪನಿ ನಷ್ಟದಲ್ಲಿದೆ. ಅದರಿಂದಾಗಿ ನಿರ್ವಹಣೆ ಕಷ್ಟ ಸಾಧ್ಯ ಎಂದು ಹೇಳಿದ್ದರಿಂದ ಮಾತುಕತೆ ಮುರಿದುಬಿದ್ದಿತು. ಅದರಿಂದಾಗಿ ಕಾರ್ಮಿಕರ ಭವಿಷ್ಯ ಅತಂತ್ರವಾಗಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಕಂಪನಿಯ ಆಡಳಿತ ವರ್ಗದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಧರಣಿ ನಡೆಸಿದ್ದು, ಮುಂದಿನ ದಿನಗಳಲ್ಲಿ ಕಾರ್ಖಾನೆ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಶೇಕ್ಷಾಖಾದ್ರಿ, ಎಚ್.ಪದ್ಮಾ, ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಶರಣೇಗೌಡ, ಪ್ರವೀಣರೆಡ್ಡಿ, ಮಲ್ಲೇಶ್, ಪ್ರದೀಪ್, ಜೆ.ಎಂ. ಚನ್ನಬಸಯ್ಯ, ಸಂಧ್ಯಾ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.