ನಡುಗಡ್ಡೆ ಪ್ರವಾಹ ಇಳಿಮುಖ
ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಪ್ರವಾಹ ತಗ್ಗಿದ್ದು ನದಿ ತೀರದ ನಿವಾಸಿಗಳಲ್ಲಿ ನೆಮ್ಮದಿ ತಂದಿದೆ.
ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯದಿಂದ ಹೊರಹರಿಸಲಾಗುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದ್ದು ಕಳೆದೊಂದು ವಾರದಿಂದ ಪ್ರವಾಹ ಭೀತಿಯಲ್ಲಿದ್ದ ಪ್ರದೇಶಗಳ ನಿವಾಸಿಗಳಿಗೆ ಕೊಂಚ ಮಟ್ಟಿಗಿನ ನಿರಾಳತೆ ದೊರೆತಿದೆ.
ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ನಡುಗಡ್ಡೆಗಳ ವಾಸಿಗಳಿಗೆ ಪ್ರವಾಹ ಇಳಿಮುಖವಾಗಿದ್ದು ನೆಮ್ಮದಿ ತಂದಿದೆ. ಇನ್ನು ದೇವದುರ್ಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿಯೂ ಪ್ರವಾಹ ಭೀತಿ ಕಡಿಮೆಯಾಗಿದೆ. ದೇವದುರ್ಗದ ಹೂವಿನಹೆಡಗಿ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಇಳಿಕೆಯಾಗಿದ್ದು ಸಣ್ಣ ವಾಹನಗಳು ಸಂಚರಿಸಲು ಅನುವಾಗಿದೆ. ಇನ್ನು ಕೊಪ್ಪರ ಲಕ್ಷ್ಮೀನರಸಿಂಹ ದೇವಸ್ಥಾನ ಸುತ್ತುವರಿದಿದ್ದ ನೀರೂ ಸಹ ಇಳಿದಿದ್ದು ಪೂಜೆ ಕೈಂಕರ್ಯ ನಡೆದವು.
ರಾಯಚೂರು ತಾಲೂಕಿನ ಗುರ್ಜಾಪುರ- ಕಾಡ್ಲೂರು ಮಧ್ಯೆ ಕೃಷ್ಣಾ ಹಿನ್ನೀರಿನಿಂದಾಗಿ ರಸ್ತೆ ಸಂಪರ್ಕ ಸತತ 6ನೇ ದಿನವೂ ಸ್ಥಗಿತಗೊಂಡಿದೆ. ಜನತೆ ಸುತ್ತು ಬಳಸಿ ರಾಯಚೂರು ನಗರಕ್ಕೆ ಆಗಮಿಸುವಂತಾಗಿದೆ. ಜಿಲ್ಲೆಯ ಸಿಂಧನೂರು, ಮಾನವಿ ಹಾಗೂ ಆಂಧ್ರದ ಮಂತ್ರಾಲಯದಲ್ಲಿ ತುಂಗಭದ್ರಾ ನದಿಯಲ್ಲಿ ಪ್ರವಾಹ ತಗ್ಗಿದ್ದು ಜನತೆಗೆ ನಿರಾಳತೆ ತಂದಿದೆ.