ಮಹಿಳೆಯ ಬರ್ಬರ ಕೊಲೆ ಐವರ ವಿರುದ್ಧ ಪ್ರಕರಣ ದಾಖಲು
ಸಿಂಧನೂರು: ತಾಲೂಕಿನ ಬಳಗಾನೂರು- ಮಸ್ಕಿ ಗ್ರಾಮಗಳ ಮಧ್ಯೆ ಹೊಲವೊಂದರಲ್ಲಿ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬುಧವಾರ ಜರುಗಿದೆ.
ಕೊಲೆಯಾದ ದೇವಮ್ಮ ನಾಗಪ್ಪನ ಎರಡನೇ ಪತ್ನಿ. ಮಂಗಳವಾರ ಮಧ್ಯರಾತ್ರಿಯಿಂದ ಬುಧುವಾರ ಬೆಳಗಿನ 11 ಗಂಟೆಯೊಳಗೆ ಈ ಕೊಲೆ ನಡೆದಿರಬಹುದು. ದೇವಮ್ಮನ ಪತಿ ನಾಗಪ್ಪ ಪರಾರಿಯಾಗಿರುವುದರಿಂದ ಆತ ಹಾಗೂ ಮೊದಲ ಪತ್ನಿಯ ನಾಲ್ವರು ಸಂಬಂಧಿಗಳು ಈ ಕೊಲೆಗೆ ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ.
ದೇವಮ್ಮನ ಅಣ್ಣ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಶೇಖರಪ್ಪ ಭೇಟಿ ನೀಡಿದ್ದಾರೆ. ಈ ಕುರಿತು ತನಿಖೆಯ ಜಾಲ ಬೀಸಲಾಗಿದೆ ಎಂದು ಬಳಗಾನೂರು ಪೊಲೀಸ್ ಠಾಣೆಯ ಪಿಎಸ್ಐ ಬಾಳನಗೌಡ್ರು ತಿಳಿಸಿದ್ದಾರೆ.
ವೈಷಮ್ಯ: ಕಾಲು ಕತ್ತರಿಸಿ ಪರಾರಿ
ಸಿಂಧನೂರು: ವೈಯಕ್ತಿಕ ದ್ವೇಷದಿಂದಾಗಿ ಕೊಡಲಿಯಿಂದ ವ್ಯಕ್ತಿಯ ಬಲಗಾಲನ್ನು ಕಡಿದು ಆರೋಪಿಗಳು ಪರಾರಿಯಾದ ಹೃದಯವಿದ್ರಾವಕ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ನಾಗರಾಜ ತಂ. ಗೋವಿಂದಪ್ಪ ಉಪ್ಪಾರ(40) ಕಾಲುಕಳೆದುಕೊಂಡವರು. ದೇವರಗುಡಿ ರಸ್ತೆಯ ತಮ್ಮ ಹೊಲದಲ್ಲಿ ಎತ್ತುಗಳನ್ನು ಕಟ್ಟುವ ಶೆಡ್ ಪಕ್ಕದಲ್ಲಿ ಪೂರ್ಣ ಹೊದಿಕೆಯೊಂದಿಗೆ ನಾಗರಾಜ ಮಲಗಿದ್ದಾಗ ಅದೇ ಶೆಡ್ನಲ್ಲಿದ್ದ ಕೊಡಲಿಯನ್ನು ಬಳಸಿ ಆತನ ಬಲಗಾಲನ್ನು ಕಡಿದು ಹಾಕಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಬಳ್ಳಾರಿಯ ಒಪಿಡಿಗೆ ಕಳುಹಿಸಿ ಕೊಡಲಾಗಿದೆ. ಘಟನಾ ಸ್ಥಳಕ್ಕೆ ಶಹರ ಪೊಲೀಸ್ ಠಾಣೆಯ ಪಿಎಸ್ಐ ನಿಂಗಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ. ತನಿಖೆಯನ್ನು ಚುರುಕುಗೊಳಿಸುವುದಾಗಿ ಪಿಎಸ್ಐ ಹೇಳಿದರು.
ರಾಜ್ಯ ಮಟ್ಟಕ್ಕೆ ಆಯ್ಕೆ
ಮಸ್ಕಿ: ರಾಯಚೂರಿನ ಡಯಟ್ ಕೇಂದ್ರದಲ್ಲಿ ಇತ್ತೀಚೆಗೆ ಜರುಗಿದ ಪ್ರಸಕ್ತ ಸಾಲಿನ ಇನ್ಸ್ಪೈರ್ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಇಲ್ಲಿನ ಶಾರದಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರೇಷ್ಮಾ ಸೊಪ್ಪಿಮಠ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಕಲಚೇತನರ ಗಾಲಿಕುರ್ಚಿ ಮಾದರಿ ಪ್ರದರ್ಶಿಸಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಅವಿರೋಧ ಆಯ್ಕೆ
ರಾಯಚೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಪರ್ಧಿಸಿದ್ದ ವಾರ್ತಾ ಇಲಾಖೆಯ ವಾಹನ ಚಾಲಕ ಎಂಡಿ ಸಲೀಂ ಪಾಶಾ ಅವಿರೋಧ ಆಯ್ಕೆಯಾಗಿದ್ದಾರೆ.