ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

150 ಮಂದಿ ಬಂಧನ, ಬಿಡುಗಡೆ

Vishwanath S
Updated On : 2 Jun 2013, 12:23 pm

ಕನ್ನಡಪ್ರಭ ವಾರ್ತೆ ,   ರಾಯಚೂರು ,   ಜೂ.1
ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪುನಾರಂಭಿಸಬೇಕು. 286 ಸಿಬ್ಬಂದಿಯನ್ನು ಪುನಾ ಸೇವೆಗೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಒಪೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಆಸ್ಪತ್ರೆಯ ಸಿಬ್ಬಂದಿ ರಸ್ತೆ ತಡೆ ನಡೆಸಿದ್ದರಿಂದ ಪೊಲೀಸರು 150ಕ್ಕೂ ಹೆಚ್ಚಿನ ಜನರನ್ನು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ಶನಿವಾರ ನಡೆಯಿತು.
ನಗರದ ಹೈದರಾಬಾದ್ ರಸ್ತೆಯಲ್ಲಿರುವ ಆಸ್ಪತ್ರೆಯ ಮುಂಭಾಗದಲ್ಲಿ ಒಪೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಹಾಗೂ ಆಸ್ಪತ್ರೆಯ ನೌಕರರ ಸಂಘದ ನೂರಾರು ಕಾರ್ಯಕರ್ತರು ಶನಿವಾರ ರಸ್ತೆ ತಡೆ ನಡೆಸಿದರು.
ಆರೋಗ್ಯ ಸೇವೆಯಿಲ್ಲದೆ ಸಂಕಷ್ಟ: ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಆರ್.ಮಾನಸಯ್ಯ ಮತ್ತಿತರರು, ರಾಜ್ಯ ಸರ್ಕಾರ ಆಸ್ಪತ್ರೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ಬೀಗ ಜಡಿದು ಒಂದು ವರ್ಷ ಕಳೆದಿದೆ. ಆಸ್ಪತ್ರೆಯ ಪುನಾರಂಭದ ಬಗ್ಗೆ ನೀಡಿದ್ದ ಭರವಸೆ ಹುಸಿಗೊಳಿಸಿದೆ. ಇದರಿಂದ ಈ ಭಾಗದ ಜನತೆಗೆ ಆರೋಗ್ಯ ಸೇವೆಯಿಲ್ಲದೇ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿ ಈ ಹಿಂದೆ ಅಪೋಲೋ ಸಂಸ್ಥೆಯ ನಿರ್ವಹಣೆ ವೇಳೆ ಕಳೆದ 11 ವರ್ಷದಿಂದ ಕಾರ್ಯನಿರ್ವಹಿಸಿದ್ದ ವಿವಿಧ ವಿಭಾಗಗಳ 286 ಜನ ಸಿಬ್ಬಂದಿಯು ಆಸ್ಪತ್ರೆಯ ಮುಚ್ಚುವಿಕೆಯಿಂದ ನೌಕರಿ ಕಳೆದುಕೊಂಡಿದ್ದು ಅವರ ಕುಟುಂಬಗಳ ಬದುಕು ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.
ಪುನಾರಂಭದ ಮುನ್ಸೂಚನೆಯಿಲ್ಲ: ಆಸ್ಪತ್ರೆಯ ಪುನಾರಂಭದ ಬಗ್ಗೆ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. 286 ಜನ ಸಿಬ್ಬಂದಿ ಸೇವೆ ಮುಂದುವರಿಕೆಗೂ ಒಪ್ಪಿಗೆ ಸೂಚಿಸಿತ್ತು. ಅದರಂತೆ ಆಸ್ಪತ್ರೆಯ ನವೀಕರಣಕ್ಕೆ 39 ಕೋಟಿ ಮಂಜೂರು ಮಾಡಿದ್ದರೂ ಅದರಲ್ಲಿ 2 ಕೋಟಿ ಮಾತ್ರ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ಹಾಗೆಯೇ ಆಸ್ಪತ್ರೆಯ ಪುನಾರಂಭದ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡ ಆಸ್ಪತ್ರೆಯ ಪುನಾರಂಭಕ್ಕೆ ಆಸಕ್ತಿ ತೋರುತ್ತಿಲ್ಲ. ಇದರಿಂದ ಸಿಬ್ಬಂದಿ ಬದುಕು ಅತಂತ್ರತೆಗೆ ಸಿಲುಕಿದೆ. ರಾಜ್ಯ ಸರ್ಕಾರ ಕೂಡಲೇ ಒಪೆಕ್ ಆಸ್ಪತ್ರೆಯನ್ನು ಪುನಾರಂಭಿಸಬೇಕು. 286 ಜನ ಸಿಬ್ಬಂದಿಗೆ ಪುನಾ ನೇಮಿಸಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ರಸ್ತೆ ತಡೆ- ಪಟ್ಟು: ಈ ವೇಳೆ ರಸ್ತೆ ತಡೆ ನಡೆಸಿದ್ದರಿಂದ ಹೈದರಾಬಾದ್ ರಸ್ತೆಯಲ್ಲಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಭಾರೀ ವ್ಯತ್ಯಯವಾಯಿತು. ನೂರಾರು ವಾಹನಗಳು ಸಾಲಾಗಿ ನಿಂತಿದ್ದು ಕಂಡುಬಂದಿತು. ರಾಜ್ಯ ಸರ್ಕಾರ ಆಸ್ಪತ್ರೆಯ ಪುನಾರಂಭದ ಬಗ್ಗೆ ಸ್ಪಷ್ಟ ಆದೇಶ ಹೊರಡಿಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೋರಾಟ ಸಮಿತಿ ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಪಟ್ಟುಹಿಡಿದರು.
ಈ ವೇಳೆ  ಸ್ಥಳಕ್ಕೆ ಧಾವಿಸಿದ ಪೊಲೀಸರು ಹೋರಾಟಗಾರರ ಮನವೊಲಿಸಲು ಯತ್ನಿಸಿ ಕೊನೆಗೆ ಅವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಹೋರಾಟದಲ್ಲಿ ಒಪೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಮುಖಂಡ ರಾಜಶೇಖರ್ ಸೇರಿದಂತೆ ಆಸ್ಪತ್ರೆಯ ನೌಕರರ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement