ಕೇಂದ್ರದ ಜನ ವಿರೋಧಿ ನೀತಿಗೆ ಖಂಡನೆ
ಕನ್ನಡಪ್ರಭ ವಾರ್ತೆ , ರಾಯಚೂರು , ಜೂ.1
ಕೇಂದ್ರದ ಸಬ್ಸಿಡಿ ನೇರ ಖಾತೆಗೆ ವರ್ಗಾವಣೆ ಹಾಗೂ ಜನವಿರೋಧಿ ನೀತಿ ಖಂಡಿಸಿ ಸಿಐಟಿಯು ಸಂಘಟನೆಯಿಂದ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಧಾರ್ ಕಾರ್ಡ್ ಮೂಲಕ ಗ್ರಾಹಕರ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಕುತಂತ್ರ ಕೇಂದ್ರ ಸರ್ಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಬ್ಸಿಡಿ ಗ್ರಾಹಕರಿಗೆ ಮರುಪಾವತಿಸುವಲ್ಲಿ ವಿಳಂಬ ಮಾಡುವ ಮೂಲಕ ಸಮಸ್ಯೆ ತಂದೊಡ್ಡುವ ತಂತ್ರ ಇದಾಗಿದೆ ಎಂದು ಟೀಕಿಸಿದರು.
ಜೀವನ ನಿರ್ವಹಣೆ ಕಷ್ಟ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯಿಂದಾಗಿ ಬಡವರು ಸಂಕಷ್ಟದ ಬದುಕು ಕಳೆಯುತ್ತಿದ್ದಾರೆ. ಅದರಲ್ಲೂ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಕಾಲದಿಂದ ಕಾಲಕ್ಕೆ ಏರಿಕೆ ಮಾಡುತ್ತಿರುವುದು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ದಾರಿ ಮಾಡುತ್ತಿದೆ. ಅದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿಯೇ ಕರ್ನಾಟಕದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಇಂಧನದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಅದರಿಂದ ಗ್ರಾಹಕರು ತೊಂದರೆಗೆ ಸಿಲುಕಿದ್ದು, ತೆರಿಗೆ ಕಡಿತಗೊಳಿಸಲು ಸರ್ಕಾರ ಮುಂದಾಗುತ್ತಿಲ್ಲ. ಈ ಮಧ್ಯೆ ಜೂ. 1ರಿಂದಲೇ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಬ್ಯಾಂಕ್ ಖಾತೆಗೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಹಣ ಜಮಾ ಮಾಡುವ ನೀತಿ ಜಾರಿಗೆ ತರಲಾಗಿದೆ. ಇದರಿಂದ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಹತ್ತಾರು ರೀತಿಯ ಸಮಸ್ಯೆಗಳು ಎದುರಾಗಲಿವೆ ಎಂದು ಶಂಕೆ ವ್ಯಕ್ತಪಡಿಸಿದರು.
ಹೋರಾಟಕ್ಕೆ ನಿರ್ಧಾರ: ಕೇಂದ್ರ ಸರ್ಕಾರವು ಆರಂಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಮಾತ್ರ ಸಬ್ಸಿಡಿ ಜಮಾ ವ್ಯಾಪ್ತಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲ 27 ಸೇವೆಗಳನ್ನು ಈ ಮಾದರಿಯಲ್ಲಿಯೇ ಸಬ್ಸಿಡಿ ರಹಿತಗೊಳಿಸುವ ತಂತ್ರ ಅನುಸರಿಸಲಿದೆ. ಈ ನಿಟ್ಟಿನಲ್ಲಿ ಈಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಮಿಕ ನಾಯಕರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಚರ್ಚಿಸಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ತಾರತಮ್ಯ ನೀತಿ: ದೇಶದಲ್ಲಿ ಅನಗತ್ಯವಾಗಿ ಸಾರ್ವಜನಿಕ ಆಹಾರ ವಿತರಣೆ ಪದ್ಧತಿಯಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡಲಾಗಿದೆ. 1996ಕ್ಕೂ ಮೊದಲು ಎಪಿಎಲ್, ಬಿಪಿಎಲ್ ಎಂಬ ತಾರತಮ್ಯವಿಲ್ಲದೇ ಎಲ್ಲ ಪಡಿತರ ಚೀಟಿದಾರರಿಗೆ ಒಂದೇ ರೀತಿಯ ವಿತರಣೆ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಆನಂತರದಲ್ಲಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಿಪಿಎಲ್, ಎಪಿಎಲ್ ಎಂಬ ಕಾರ್ಡುಗಳನ್ನು ಜಾರಿಗೆ ತಂದು ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ಪ್ರಚಾರಾಂದೋಲನ: ಪಡಿತರ ಅಕ್ಕಿಯನ್ನೂ ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡಿಗೆ ಲಿಂಕ್ ಮಾಡುವ ಉದ್ದೇಶ ಕೇಂದ್ರದ್ದಾಗಿದೆ. ಅದರಿಂದ ಅನೇಕ ಗೊಂದಲ ಉದ್ಭವವಾಗಲಿದೆ. ಈ ರೀತಿಯ ತಂತ್ರಗಾರಿಕೆಯಿಂದ ದೇಶದ ಬಡ ಜನತೆಗೆ ತೊಂದರೆಯಾಗಲಿದೆ ಎಂದ ಅವರು, ಕೇಂದ್ರ ಸರ್ಕಾರದ ಸಬ್ಸಿಡಿ ಕಡಿತ, ಜನವಿರೋಧಿ ನೀತಿಯ ವಿರುದ್ಧ ಮೇ 30ರಿಂದ ಜೂ. 14ರವರೆಗೆ ದೇಶಾದ್ಯಂತ ಪ್ರಚಾರಾಂದೋಲನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ 10 ಸಾವಿರ ನೀಡಬೇಕು. ಅವರನ್ನು ಗೌರವ ಧನದಲ್ಲಿ ದುಡಿಸಿಕೊಳ್ಳುವುದು ಸರಿಯಲ್ಲ ಎಂಬ ವಾದವನ್ನು ಇತ್ತೀಚೆಗೆ ನಡೆದ ದೆಹಲಿಯ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಎದುರು ಮಂಡಿಸಲಾಗಿದೆ ಎಂದು ತಿಳಿಸಿದರು.
ಸಂಘಟನೆಯ ಪ್ರಮುಖರಾದ ಎಚ್. ಪದ್ಮಾ, ಶೇಕ್ಷಾಖಾದ್ರಿ ಮತ್ತಿತರರು ಇದ್ದರು.