ಭಗವಂತನ ಕೃಪೆಯಿಂದ ಮುಕ್ತಿ ಸಾಧ್ಯ: ಶಿವಾನಂದ ಶ್ರೀ
ಕನ್ನಡಪ್ರಭ ವಾರ್ತೆ , ಮುದಗಲ್ , ಜೂ.1
ಸಮಾಜದಲ್ಲಿ ಬದುಕುವ ಮನುಷ್ಯ ಭಕ್ತಿಯಿಂದ ಭಗವಂತನನ್ನು ವಲಿಸಿಕೊಂಡು ಕೃಪೆಗೆ ಪಾತ್ರನಾದರೆ ಸಕಲಸುಖಗಳನ್ನ ಅನುಭವಿಸಲು ಸಾಧ್ಯ ಎಂದು ಇಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ನಿರಭಾರಿ ಡಾ. ಶಿವಾನಂದ ಭಾರತಿ ಸ್ವಾಮಿಗಳು ನುಡಿದರು.
ಪಟ್ಟಣ ಸಮೀಪದ ಅಂಕಲಿಮಠದಲ್ಲಿ ಜಾತ್ರಾಮಹೋತ್ಸವದ ನಿಮಿತ್ತ ಶನಿವಾರ ಜರುಗಿದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನವ ಧರ್ಮ ವೇದಿಕೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಹಾತ್ಮರು ಮನಸು ಹೊಲಿದಾಗ ಕೆಳವರ್ಗದವನಿಗೆ ಆರ್ಶೀವದಿಸಿದರೂ ಕೂಡ ಜಗಜೋತಿಯಾಗಿ ಬೆಳೆಯಬಹುದಾಗಿದೆ. ಆ ನಿಟ್ಟಿನಲ್ಲಿ ಅಂಕಲಿಮಠದ ಶ್ರೀ ಮಠವು ನಡೆದುಕೊಂಡು ಬರುತ್ತಿದೆ ಎಂದರು.
ಗುರುವಿನ ಸನ್ಮಾರ್ಗದ ಕಡೆಗೆ: ವೇದಿಕೆಯ ಅಧ್ಯಕ್ಷತೆ ವಹಿಸದ್ದ ಅಂಕಲಿಮಠದ ವೀರಭದ್ರಸ್ವಾಮಿಗಳು ಮಾತನಾಡಿ, ಅರಿವಿನಿಂದ ಬದುಕುವುದು ಮುಖ್ಯ. ಜೀವನದ ಯಾತ್ರಿಗಳಾದ ನಾವು ಗುರುವಿನ ಮಾರ್ಗದರ್ಶನದಿಂದ ಸನ್ಮಾರ್ಗದ ಕಡೆ ನಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕಾಗಿದೆ ಎಂದರು.
ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಇಂದು ಸಮಾಜಕ್ಕೊಂದು ಮಠಗಳು ಹುಟ್ಟಿಕೊಂಡಿರುವುದು ಸಂತೋಷ. ಆದರೆ ಪೀಠಾಧಿಪತಿಗಳು ಯಾವುದೋ ಒತ್ತಡಕ್ಕೆ ಮಣಿದು ರಾಜಕೀಯ ವ್ಯಕ್ತಿಗಳ ಬೆನ್ನ ಹಿಂದೆ ನಿಲ್ಲುವ ಪದ್ಧತಿ ನಿಲ್ಲಬೇಕಾಗಿದೆ ಎಂದು ಹೇಳಿದರು.
ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ತಾಲೂಕಿನ ಅಭಿವೃದ್ಧಿ ಸಾಧ್ಯವಾಗಿಲ್ಲ. ಆದರೆ ಮರು ಆಯ್ಕೆ ಮಾಡಿದ ಜನತೆಯ ಋಣ ತೀರಿಸಲು ಮಠಗಳಲ್ಲಿ ಯಾತ್ರಿ ನಿವಾಸ, ರಸ್ತೆ, ಕುಡಿವ ನೀರು ಸೇರಿ ಹಲವು ಸೌಕರ್ಯಗಳು ಕಲ್ಪಿಸಬೇಕಾಗಿದೆ. ಅಂಕಲಿಮಠದ ಆಶೀರ್ವಾದದಿಂದ ನಾನು ಜನಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದರು.