5ರಂದು ಶರೀಫಖಾನ್ ಸಾಹೇಬ ಉರೂಸ್
ಸಿಂಧನೂರು: ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಹಜರತ್ ಮಹ್ಮದ್ ಶರೀಫಖಾನ್ ಸಾಹೇಬ ತಾತನವರ ಉರೂಸ್ ಜೂ.5ರಂದು ಸಂಭ್ರಮದಿಂದ ಜರುಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ನಿಮಿತ್ತ ಜೂ. 4ರಂದು ಅಹೋರಾತ್ರಿ ದುರ್ಗಾದೇವಿ ಹಾಗೂ ಬಸವೇಶ್ವರ ಭಜನಾ ಮಂಡಳಿಗಳ ಸಹಯೋಗದಲ್ಲಿ ಭಜನಾ ಕಾರ್ಯಕ್ರಮಗಳು ನಡೆಯುವವು. ಬೆಳಗ್ಗೆ ಸಂತೆಕೆಲ್ಲೂರು ಗ್ರಾಮದ ಶಿವಯೋಗಿ ಘನಮಠೇಶ್ವರರ ಮಠದಿಂದ ಗುರುಬಸವ ಸ್ವಾಮಿಗಳ ನೇತೃತ್ವದಲ್ಲಿ ಮೆರವಣಿಗೆಯ ಮೂಲಕ ಗಂಧ ಬರುವುದು. ಗ್ರಾಮದ ಹೊಸಮನಿ ಖಾನಸಾಹೇಬರ ಮನೆಯಿಂದಲೂ ಗಂಧವನ್ನು ತಂದು ಖಾನಸಾಹೇಬರ ಕರ್ತೃ ಗದ್ದುಗೆಗೆ ಅರ್ಪಿಸಲಾಗುವುದು.
ಸಂತೆಕೆಲ್ಲೂರು ಶ್ರೀಗಳು, ಪರ್ವತೇಶ್ವರ ದೇವಸ್ಥಾನದ ಗುರುನಾಥ ಮಹಾರಾಜರು, ಮಹಾಂತ ದೇವರು ಮಹಾಂತಿನಮಠ ಹಾಗೂ ಮಸ್ಕಿಯ ಶೇಖ್ಖಾಜಾ ಮೊಹಿನುದ್ದೀನ್ ಖಾಜಿ ಅವರ ಸಮ್ಮುಖದಲ್ಲಿ ಗಲೀಫ್, ಗಂಧ, ಹೂ ಸಮರ್ಪಿಸಿ ಧ್ವಜಾರೋಹಣ ನಡೆಸಲಾಗುವುದು. ನಂತರ ಖುರಾನ್ ಪಠಣ, ಭಾಷಣ, ಆಶೀರ್ವಚನ ಕಾರ್ಯಕ್ರಮಗಳು ಜರುಗುವವು.
ಉರೂಸ್ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ನಿರುಪಾಧೀಶ್ವರ ಮಠದಲ್ಲಿ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಗ್ರಾಮದ ಭಕ್ತರು ತಿಳಿಸಿದ್ದಾರೆ. ಗುಡದೂರು, ಗೋನಾಳ, ದೀನಸಮುದ್ರ, ರಂಗಾಪುರ, ಪರಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.