ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯ ಒದಗಿಸಿ: ರಾಮಚಂದ್ರಪ್ಪ ಒತ್ತಾಯ

Lingaraj Badiger
Updated On : 3 Jun 2013, 11:15 am

ಸಿಂಧನೂರು: ಹಲವು ದಶಕಗಳಿಂದ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯವಿಲ್ಲದಾಗಿದೆ. ಪ್ರತಿ ವರ್ಷ ಕೇಂದ್ರ ಹೆಚ್ಚಳ ಮಾಡುತ್ತಿರುವ ಸರ್ಕಾರಗಳು ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಈ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಒತ್ತಾಯಿಸಿದರು.
ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರಗಳಿಗೆ ಶಾಸನ ಬದ್ಧ ಹಕ್ಕು ನೀಡದ ಸರ್ಕಾರಗಳಿಂದ ವಂಚನೆ ನಿರಂತರವಾಗಿದೆ. ನಮ್ಮ ಹೋರಾಟ ಗಟ್ಟಿಗೊಳ್ಳಬೇಕು. ಕಾರ್ಯಕರ್ತೆಯರಿಗೆ 3 ಸಾವಿರ ಫೆನ್‌ಶನ್, 10 ಸಾವಿರ ಸಂಬಳ ನೀಡಬೇಕು.
ಹೋರಾಟಕ್ಕೆ ಮನ್ನಣೆ ಇಲ್ಲ: 150 ರಿಂದ ಪ್ರಾರಂಭಗೊಂಡ ಸಂಬಳ 5 ಸಾವಿರ ತಲುಪಿದರೂ ಜೀವನಕ್ಕೆ ಆಧಾರವಾಗುತ್ತಿಲ್ಲ. ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ನಡೆಸುತ್ತಿರುವ ಹೋರಾಟಕ್ಕೆ ಮನ್ನಣೆ ಇಲ್ಲದಾಗಿದೆ. 60 ವರ್ಷಗಳ ಕಾಲ ದುಡಿದ ಕಾರ್ಯಕರ್ತೆಯರಿಗೆ 40 ಮತ್ತು 50 ಸಾವಿರ ನೀಡಿ ಕಳುಹಿಸಲಾಗುತ್ತಿದೆ. ಇದರಿಂದ ಬದುಕುವುದು ಕಷ್ಟ ಎನ್ನುವಂತಾಗಿದೆ. ಹಗಲಿರುಳು ದುಡಿಯುವ ಕಾರ್ಮಿಕರಿಗೆ ಬೆಲೆ ಇಲ್ಲದಂತಾಗಿದೆ. ಗುತ್ತಿಗೆ ಆಧಾರದ ಮೇಲೆ ನೌಕರರನ್ನು ಸೇವೆಗೆ ಪಡೆದು ಶೋಷಣೆಗೆ ಒಳಪಡಿಸಲಾಗುತ್ತಿದೆ. ಆಳುವ ಸರ್ಕಾರಗಳು ಕಾರ್ಮಿಕರಿಗೆ ಮೋಸ ಮಾಡುತ್ತಿವೆ ಎಂದರು ಆರೋಪಿಸಿದರು.
ಪೌಷ್ಠಿಕ ಆಹಾರ ವಿತರಣೆಗೆ ಮನವಿ: ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಆಶ್ರಯ ಯೋಜನೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ಕಾರ್ಯಕರ್ತೆಯರು ಕೇಂದ್ರಗಳಿಗೆ ಬರುವ ಮಕ್ಕಳಿಗೆ ಸರ್ಕಾರ ನೀಡುವ ಪೌಷ್ಠಿಕ ಆಹಾರವನ್ನು ಸರಿಯಾಗಿ ವಿತರಿಸಬೇಕು ಎಂದು ಸಲಹೆ ನೀಡಿದರು.
ಫೆಡರೇಷನ್‌ನ ಜಿಲ್ಲಾಧ್ಯಕ್ಷ ಡಿ.ಎಚ್.ಕಂಬಳಿ, ತಾಲೂಕಾಧ್ಯಕ್ಷೆ ಗಿರಿಜಮ್ಮ, ಸಿಡಿಪಿಓ ಹನುಮಂತಪ್ಪ ಓಲೇಕಾರ, ಲೋಕೋಪಯೋಗಿ ಇಲಾಖೆಯ ಎಇಇ ಬಿ.ಆರ್.ಗೌಡೂರು, ಕ್ಷೇತ್ರಶಿಕ್ಷಣಾಧಿಕಾರಿ ಜಿ.ಎಣ.ವೃಷಭೇಂದ್ರಯ್ಯಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ, ಎಐಟಿಯುಸಿ ಜಿಲ್ಲಾಧ್ಯಕ್ಷ ಸಂಗಯ್ಯಸ್ವಾಮಿ ಚಿಂಚರಕಿ, ಮುಖಂಡ ವೆಂಕನಗೌಡ ಗದ್ರಟಗಿ, ಅಮರೇಶ ಪಾಟೀಲ, ಹನುಮೇಶ ಗಿಣಿವಾರ, ತಿಪ್ಪಯ್ಯ ಶೆಟ್ಟಿ, ಚಂದ್ರಶೇಖರ ಕ್ಯಾತನಟ್ಟಿ, ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷ್‌ನ ಅಧ್ಯಕ್ಷೆ ಗಿರಿಜಮ್ಮ ದಢೇಸ್ಗೂರು, ಕಾರ್ಯದರ್ಶಿ ಸರಸ್ವತಿ ಮತ್ತಿತರರು ಪಾಲ್ಗೊಂಡಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಸಿಡಿಪಿಓ ಹನುಮಂತಪ್ಪ ಓಲೇಕಾರ, ನೂತನ ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಮತ್ತಿತರ ಗಣ್ಯರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement