ಕಾವೇರಿ ನೀರು ಜುಲೈವರೆಗೆ ಕೇಳಬೇಡಿ: ಸಿಎಂ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.2
ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ನೀರಿನ ಕೊರತೆಯ ಸಮಯದಲ್ಲಿಯೇ ನೀರಿಗೆ ಬೇಡಿಕೆಯಿಡುವ ಮೂಲಕ ಕ್ಯಾತೆ ತೆಗೆದಿರುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶಾಸಕ ಬಾದರ್ಲಿ ಹಂಪನಗೌಡರ ಪುತ್ರನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡು ಜೂನ್ ಮೊದಲ ವಾರದಲ್ಲಿಯೇ ನೀರಿಗೆ ಬೇಡಿಕೆಯಿಟ್ಟಿರುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗದು.
ನೀರಿನ ಮಟ್ಟವೇ ಅದಕ್ಕೆ ಉತ್ತರ: ಜುಲೈ ತಿಂಗಳವರೆಗೆ ಆ ರಾಜ್ಯ ಕಾಯಲೇಬೇಕಿದೆ. ಕೇಂದ್ರ ಜಲ ಆಯೋಗವು ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿ ಏನೇ ವರದಿ ನೀಡಿದ್ದರೂ ಆಯಾ ಕಾಲಘಟ್ಟದಲ್ಲಿ ಜಲಾಶಯದಲ್ಲಿ ನೀರಿನ ಮಟ್ಟವೇ ಅದಕ್ಕೆ ಉತ್ತರ ಆಗಲಿದೆ ಎಂದರು.
ತಮಿಳುನಾಡು ಸರ್ಕಾರ ಸದ್ಯ 10 ಟಿಎಂಸಿ ನೀರಿಗೆ ಬೇಡಿಕೆಯಿಟ್ಟಿದೆ. ಆದರೆ ಆ ವಿಚಾರವನ್ನು ಜುಲೈ ತಿಂಗಳಿನಲ್ಲಿಯೇ ಪರಿಶೀಲಿಸಲಾಗುತ್ತದೆ. ಕಳೆದ ವರ್ಷ ರಾಜ್ಯದ ಜನತೆಗೆ ಕುಡಿಯುವ ನೀರಿನ ಅಭಾವ ಉಂಟಾಗಿದ್ದರೂ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಈಗ ನೀರಿನ ತೀವ್ರ ಅಭಾವವಿದ್ದು, ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಐದು ವರ್ಷಗಳಲ್ಲಿ ಪೂರ್ಣ: ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಮಗಾರಿಗಳನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ. ಜುಲೈ ತಿಂಗಳಿನಲ್ಲಿ ತಾವು ಬಜೆಟ್ ಮಂಡಿಸಲಿದ್ದು, ಬಜೆಟ್ನಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಹೈ.ಕ. ಭಾಗಕ್ಕೆ 371ನೇ ಕಲಂ(ಜೆ) ಅಡಿ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಲಿದೆ. ರಾಜ್ಯದಲ್ಲಿ ಸದ್ಯ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿವೆ. ರೈತರಿಗೆ ಸೂಕ್ತ ಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲೆಗೆ ಸಚಿವ ಸ್ಥಾನ ನೀಡದೇ ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ನಿರ್ಲಕ್ಷ್ಯ ತೋರಿದೆ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಈ ಅನ್ಯಾಯ ಸರಿಪಡಿಸಲಾಗುತ್ತದೆ ಎಂದು ಹೇಳಿ ಜಾರಿಕೊಂಡರು.
ಈ ವೇಳೆ ಸಚಿವರಾದ ಮಹಾದೇವಪ್ಪ ಮತ್ತು ಮಹಾದೇವಪ್ರಸಾದ್ ಉಪಸ್ಥಿತರಿದ್ದರು.