ಆಂಧ್ರಾ ಬ್ಯಾಂಕ್; 111.31 ಕೋಟಿ ರು. ವಹಿವಾಟು
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.3
ಆಂಧ್ರಾ ಬ್ಯಾಂಕ್ ಕಳೆದ 35 ವರ್ಷಗಳಿಂದ ನಗರದಲ್ಲಿ ಶಾಖೆಯನ್ನು ಹೊಂದುವ ಮೂಲಕ ನಗರದ ಜನತೆಯ ಆರ್ಥಿಕ ಪ್ರಗತಿಗೆ ನೆರವಾಗಿದೆ. ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ಬ್ಯಾಂಕಿನ ರಾಯಚೂರು ನಗರ ಶಾಖೆಯು ಒಟ್ಟು 111.31 ಕೋಟಿ ವಹಿವಾಟು ನಡೆಸಿದೆ ಎಂದು ಬ್ಯಾಂಕಿನ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕ ಪಿ.ಎಸ್. ಸುಬ್ಬರಾವ್ ಹೇಳಿದರು.
ನಗರದಲ್ಲಿ ಸೋಮವಾರ ಆಂಧ್ರಾ ಬ್ಯಾಂಕ್‌ನ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ಶಾಖೆಯು ನಗರದಲ್ಲಿ 1977ರಲ್ಲಿ ಮೊದಲ ಬಾರಿಗೆ ಆರಂಭಗೊಂಡಿತು. ಆನಂತರದಲ್ಲಿ ತೀರಾ ಈಚೆಗೆ ಜಿಲ್ಲೆಯ ಸಿಂಧನೂರಿನಲ್ಲಿ ಶಾಖೆ ತೆರೆಯಲಾಗಿದೆ ಎಂದು ತಿಳಿಸಿದರು.
ಗ್ರಾಹಕರಿಗೆ 1 ಲಕ್ಷ ಕೋಟಿ ಸಾಲ ವಿತರಣೆ: ಆಂಧ್ರಾ ಬ್ಯಾಂಕ್ ಬೆಂಗಳೂರು ವಲಯವು ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 2,24,000 ಕೋಟಿ ವಹಿವಾಟು ನಡೆಸಿದ್ದು, 1,24,000 ಕೋಟಿ ಠೇವಣಿ ಸಂಗ್ರಹಿಸಿದೆ. 1 ಲಕ್ಷ ಕೋಟಿ ಸಾಲ ಗ್ರಾಹಕರಿಗೆ ವಿತರಿಸಿದೆ. ಬ್ಯಾಂಕು ದೇಶದ 25 ರಾಜ್ಯಗಳಲ್ಲಿ ಒಟ್ಟು 1,867 ಶಾಖೆಗಳು ಹಾಗೂ 1,207 ಎಟಿಎಂ ಗಳನ್ನು ಹೊಂದಿದೆ ಎಂದು ಹೇಳಿದರು.
ಆಂಧ್ರಾ ಬ್ಯಾಂಕು ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಹತ್ತಾರು ರೀತಿಯ ವಿವಿಧ ಸೇವೆಗಳನ್ನು ಒದಗಿಸುತ್ತಿದೆ. ವಿದೇಶಿ ಬ್ಯಾಂಕುಗಳ ಸಹಕಾರದೊಂದಿಗೆ ಅನೇಕ ನೂತನ ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದಿದೆ. ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾಡ್, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್‌ನಂಥ ಅತ್ಯಾಧುನಿಕ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಹೇಳಿದರು.
ದೇಶಾದ್ಯಂತ 22 ಮಿಲಿಯನ್ ಗ್ರಾಹಕರು: ಬ್ಯಾಂಕಿನಿಂದ ಮುಂಗಡ ಪಾವತಿ ವಿದೇಶ ಪ್ರವಾಸ ಕಾರ್ಡ್, ಮುಂಗಡ ಪಾವತಿ ಗಿಫ್ಟ್ ಕಾರ್ಡುಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ದೇಶಾದ್ಯಂತ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಒಟ್ಟು 22 ಮಿಲಿಯನ್ ಗ್ರಾಹಕರಿದ್ದಾರೆ. ಕೇಂದ್ರ ಸರ್ಕಾರದ ಉದ್ದೇಶಿತ ನೇರ ನಗದು ವರ್ಗಾವಣೆ ಪದ್ಧತಿಯಡಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಸಬ್ಸಿಡಿ ಹಣವನ್ನು ಜಮಾ ಮಾಡುವ ಸೇವೆಯನ್ನು ಕೆಲ ಜಿಲ್ಲೆಗಳಲ್ಲಿ ನೀಡುತ್ತಿದೆ ಎಂದು ಹೇಳಿದರು.
ಜಾಗೃತಿ ಕಾರ್ಯಕ್ರಮ: ಬ್ಯಾಂಕಿನಿಂದ ಗ್ರಾಮೀಣ ಭಾಗದಲ್ಲಿ ಆರ್ಥಿಕ ಕ್ಷೇತ್ರದ ಮಾಹಿತಿ ನೀಡುವ ಹಾಗೂ ಬ್ಯಾಂಕಿಂಗ್ ಸೇವೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡಿಕೆ, ಬ್ಯಾಂಕಿಂಗ್ ಸೇವೆಗಳು ಮತ್ತು ಆರ್ಥಿಕ ವಿಷಯಗಳ ಬಗ್ಗೆ ಜನತೆಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 75 ಶಾಖೆ: ಬೆಂಗಳೂರು ವಲಯದ ವ್ಯಾಪ್ತಿಯ ಕರ್ನಾಟಕದಲ್ಲಿ 75 ಮತ್ತು ಕೇರಳ ರಾಜ್ಯದಲ್ಲಿ 24 ಬ್ಯಾಂಕ್ ಶಾಖೆಗಳು ಸೇರಿ ಒಟ್ಟು 99 ಶಾಖೆಗಳನ್ನು ಹೊಂದಿದೆ. ಒಟ್ಟು 10 ಸಾವಿರ ಕೋಟಿ ರು. ವಹಿವಾಟು ಕಳೆದ ಆರ್ಥಿಕ ವರ್ಷದಲ್ಲಿ ನಡೆಸಲಾಗಿದೆ. ಶೀಘ್ರದಲ್ಲಿಯೇ ಬ್ಯಾಂಕಿನ ಮತ್ತಷ್ಟು ಶಾಖೆಗಳನ್ನು ತೆರೆಯುವ ಉದ್ದೇಶ ಬ್ಯಾಂಕಿನ ಆಡಳಿತ ಮಂಡಳಿಯದ್ದಾಗಿದೆ ಎಂದು ಸುಬ್ಬಾರಾವ್ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ(ಕ್ರೆಡಿಟ್) ತಿರುಮಲರಾವ್, ಸ್ಥಳೀಯ ಶಾಖೆಯ ಹಿರಿಯ ವ್ಯವಸ್ಥಾಪಕ ಪ್ರಸಾದ್ ಇದ್ದರು.