ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗ್ರಾಹಕನ ಜೇಬಿಗೆ ನಂದಿನಿ ಕತ್ತರಿ!

Mainashree
Updated On : 4 Jun 2013, 11:03 am

 ವಿಶೇಷ ವರದಿ
ರಾಯಚೂರು, ಕನ್ನಡಪ್ರಭ ವಾರ್ತೆ, ಜೂ.3

ಗುಣಮಟ್ಟದ ಹಾಲಿನ ಭರವಸೆ, ಬೇಡಿಕೆಗೆ ತಕ್ಕಂತೆ ಗ್ರಾಹಕರಿಗೆ ಪೂರೈಕೆ. ರೈತರಿಗೂ ಪ್ರತಿ ಲೀಟರ್‌ಗೆ ಹೆಚ್ಚಿನ ದರದ ಆಶ್ವಾಸನೆ ನೀಡುತ್ತಿರುವ ಕೆಎಂಎಫ್ ತನ್ನ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರ ಜೇಬಿಗೆ ಬೀಳುತ್ತಿರುವ ಹೆಚ್ಚುವರಿ ಕತ್ತರಿ ತಡೆಯುವಲ್ಲಿ ಮಾತ್ರ ವಿಫಲವಾಗಿದೆ. ಸಂಸ್ಥೆ ನೇಮಿಸಿದ ಮಾರಾಟಗಾರರು ಚಿಲ್ಲರೆ ಕೊರತೆ ನೆಪವೊಡ್ಡಿ ಗ್ರಾಹಕರಿಂದ ದಿನವೂ ಹೆಚ್ಚಿನ ಹಣ ಪಡೆಯುತ್ತಿರುವುದು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.
ಇತ್ತೀಚೆಗೆ ಕೆಎಂಎಫ್ ಚಿಲ್ಲರೆ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಹಾಲಿನ ದರವನ್ನು 50 ಪೈಸೆ ಹೆಚ್ಚಿಸಿದ್ದಾಗಿ ಹೇಳಿದೆ. ಚಿಲ್ಲರೆ ಸಮಸ್ಯೆಯಿಲ್ಲದ ರಾಯಚೂರಿನಲ್ಲಿ ಹಾಲಿನ ದರವನ್ನು ಏರಿಸಿಲ್ಲ ಎನ್ನುತ್ತಾರೆ ಸ್ಥಳೀಯ ಕೆಎಂಎಫ್ ಅಧಿಕಾರಿಗಳು. ಆದರೆ ಹಾಲಿನ ಮಾರಾಟಗಾರರು ಚಿಲ್ಲರೆಯಿಲ್ಲ ಎಂದು ನಿಗದಿತ ದರಕ್ಕಿಂತ ಹೆಚ್ಚಿಗೆ ರು. 2 ಪಡೆಯುತ್ತಿರುವುದು ಮಾತ್ರ ಸಂಸ್ಥೆಯ ಕಣ್ಣಿಗೆ ಬೀಳುತ್ತಿಲ್ಲ.
ಕೊಪ್ಪಳ-ರಾಯಚೂರು-ಬಳ್ಳಾರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿರುವ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಡೆ ಸಾಮಾನ್ಯ ನಂದಿನಿ ಹಾಲಿನ ನಿಗದಿತ ದರಕ್ಕಿಂತ 2 ಹೆಚ್ಚು ಪಡೆಯಲಾಗುತ್ತಿದೆ. ಪಾಶ್ಚೀಕರಿಸಿದ ಟೋನ್ಡ್ ಮಿಲ್ಕ್ 1 ಲೀಟರ್‌ನ ಪ್ಯಾಕೆಟ್ ಮೇಲೆ 28 ಎಂದು ಮುದ್ರಿಸಿದ್ದರೂ, ಗ್ರಾಹಕರಿಗೆ ಮಾತ್ರ ಈ ಹಾಲು ದೊರೆಯುತ್ತಿರುವುದು 30ಗೆ ಎಂಬುದು ಸದ್ಯದ ಸಮಸ್ಯೆ.
2 ಹೆಚ್ಚುವರಿ ಹಣ: ಇನ್ನುಳಿದಂತೆ 'ಶುಭಂ' ಮತ್ತಿತರೆ ಹಾಲಿನ ಮೇಲೂ ಗ್ರಾಹಕರು 2 ಹೆಚ್ಚುವರಿಯಾಗಿ ನೀಡುವಂತಾಗಿದೆ. ದಿನವೂ ಬೆಳಗ್ಗೆ ರಸ್ತೆ ಬಂದಿ ನಿಂತು ನಂದಿನಿ ಹಾಲು ಮಾರುವ ಬಹುತೇಕ ಏಜೆಂಟರು ಚಿಲ್ಲರೆಯಿಲ್ಲ ಎಂಬ ನೆಪವೊಡ್ಡಿ ಗ್ರಾಹಕರಿಂದ ಈ ರೀತಿಯಲ್ಲಿ ಹೆಚ್ಚಿನ ಹಣ ಪಡೆಯುತ್ತಾರೆ. ಕೆಎಂಎಫ್‌ನಿಂದ ದಿನವೂ 1.25 ಲಕ್ಷ ಲೀಟರ್ ಹಾಲು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಹೀಗೆ ಮಾರುವ ಪ್ರತಿ ಲೀಟರ್ ಹಾಲಿಗೆ ಪ್ರತಿಯಾಗಿ ರೈತರಿಗೆ ಒಕ್ಕೂಟದಿಂದ 22 ಪಾವತಿಸಲಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ.
ನಗರದಲ್ಲಿ ಒಟ್ಟು 70, ಜಿಲ್ಲೆಯಲ್ಲಿ 181 ನಂದಿನಿ ಹಾಲಿನ ಏಜೆಂಟರಿದ್ದಾರೆ. ಇವರಿಗೆ ಕೆಎಂಎಫ್‌ನಿಂದ ಪ್ರತಿ ಲೀಟರ್ ಹಾಲು ಮಾರಿದರೆ ಶೇ.4ರಷ್ಟು ಕಮಿಷನ್ ನೀಡಲಾಗುತ್ತಿದೆ. ಆದರೆ ಕಮಿಷನ್ ಹೊರತುಪಡಿಸಿ ಹೆಚ್ಚುವರಿಯಾಗಿ ಪ್ರತಿ ಲೀಟರ್‌ಗೆ 2 ಚಿಲ್ಲರೆ ಸಮಸ್ಯೆ ನೆಪದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ನಂದಿನಿ ಹಾಲನ್ನು ನಗರದ ಗ್ರಾಹಕರ ಮನೆ ಮನೆಗೆ ತಲುಪಿಸುವವರು ಸೇವೆ ನೀಡಿದ್ದಕ್ಕೆ ಪ್ರತಿಯಾಗಿ ಹೆಚ್ಚಿನ ದರವನ್ನು ಸಹಜವಾಗಿಯೇ ಪಡೆಯುತ್ತಾರೆ. ಆದರೆ ನೇರವಾಗಿ ಹಾಲು ವಿತರಕರ ಬಳಿ ತೆರಳಿ ಹಾಲು ಖರೀದಿಸಿದರೆ ಪ್ರತಿ ಲೀಟರ್‌ಗೆ 28 ಬದಲಿಗೆ 30 ಪಾವತಿಸಬೇಕಾಗಿದೆ.
ಅನ್ಯಾಯ ತಪ್ಪಲಿ: ಹೈನುಗಾರಿಕೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ ಹೆಚ್ಚಿನ ಹಣ ನೀಡುವುದು ಸರಿ. ಆದರೆ ಗ್ರಾಹಕರಿಗಾಗುತ್ತಿರುವ ಅನ್ಯಾಯದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಒಕ್ಕೂಟದ ಅಧಿಕಾರಿಗಳು ಆಸಕ್ತಿ ತೋರದಿರುವುದು ಸ್ಪಷ್ಟ.
ಒಂದೆಡೆ ಹಾಲು ಒಕ್ಕೂಟವು ಕಾಲದಿಂದ ಕಾಲಕ್ಕೆ ಹಾಲಿನ ದರ ಏರಿಸುತ್ತಲೇ ಇದೆ. ಮತ್ತೊಂದೆಡೆ ಗ್ರಾಹಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಾವತಿಸಿ ಖರೀದಿಸುವುದು ಮಾತ್ರ ತಪ್ಪಿಲ್ಲ. ಇನ್ನಾದರೂ ಕೆಎಂಎಫ್ ಅಧಿಕಾರಿಗಳು ಸಮಸ್ಯೆಯತ್ತ ಗಮನಹರಿಸಬೇಕಿದೆ. ಗ್ರಾಹಕರಿಗಾಗುತ್ತಿರುವ ಅನ್ಯಾಯ ತಪ್ಪಿಸಬೇಕಿದೆ ಎಂಬುದು ಜನರ ಆಗ್ರಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement