ದಿಢೀರ್ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.3
ನಗರಸಭೆಯ ಮೃತ ಕಾರ್ಮಿಕ ವೆಂಕಟೇಶನ ಕುಟುಂಬದವರಿಗೆ ಪರಿಹಾರ ಹಾಗೂ ದಿನಗೂಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಳಚರಂಡಿ ನಿರ್ವಹಿಸುವ ಕಾರ್ಮಿಕರ ಮೂರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಮುಂದಾದ ಕಾರ್ಮಿಕರನ್ನು ಭೇಟಿ ಮಾಡಲು ಜಿಲ್ಲಾಧಿಕಾರಿಗಳು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಕಾರ್ಮಿಕರು ದಿಢೀರ್ ಧರಣಿ ನಡೆಸಿದ ಪ್ರಸಂಗ ನಡೆಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಸೋಮವಾರ ನಗರಸಭೆಯ ದಿನಗೂಲಿ ನೌಕರರ ಸಂಘದ ಕಾರ್ಯಕರ್ತರು ಮುಖಂಡ ಅಂಬಣ್ಣ ಅರೋಲಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಕರ್ತವ್ಯ ನಿರ್ವಹಣೆ ವೇಳೆ ಮೃತನಾಗಿದ್ದ ಪೌರ ನೌಕರ ವೆಂಕಟೇಶ್ ಅವರ ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯಿಸಲು ಜಿಲ್ಲಾಧಿಕಾರಿ ನಾಗರಾಜ್ ಅವರ ಭೇಟಿಗೆ ಮುಂದಾಗಿದ್ದಾರೆ.
ಭೇಟಿಗೆ ನಕಾರ- ಆಕ್ರೋಶ: ಆದರೆ ಜಿಲ್ಲಾಧಿಕಾರಿಗಳು ಕಾರ್ಮಿಕರನ್ನು ಭೇಟಿ ಮಾಡಲು ನಿರಾಕರಿಸಿದರೆಂದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಜಿಲ್ಲಾಧಿಕಾರಿಗಳ ಕೊಠಡಿ ಪ್ರವೇಶಿಸಿ ಮನವಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಮತ್ತು ಕಾರ್ಮಿಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಮಿಕರನ್ನು ಹೊರಕಳಿಸಿದ್ದಾರೆ.
ಈ ವೇಳೆ ಆಕ್ರೋಶಗೊಂಡ ಪೌರ ನೌಕರರು ಜಿಲ್ಲಾಧಿಕಾರಿಗಳ ಕೊಠಡಿ ಮುಂದೆ ದಿಢೀರ್ ಧರಣಿ ನಡೆಸಿದರು. ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮೃತ ಕಾರ್ಮಿಕ ವೆಂಕಟೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಒಳಚರಂಡಿ ನಿರ್ವಹಣೆ ಮಾಡುವ ಕಾರ್ಮಿಕರ ಕಳೆದ ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಕೊನೆಗೆ ಭರವಸೆ: ಪೊಲೀಸರು ಹೋರಾಟಗಾರರ ಮನವೊಲಿಸಿ ಜಿಲ್ಲಾಧಿಕಾರಿಗಳ ಬಳಿ ಪುನಾ ಕರೆದೊಯ್ದಾಗ ಜಿಲ್ಲಾಧಿಕಾರಿಗಳು ನೌಕರರೊಂದಿಗೆ ಚರ್ಚಿಸಿ ಬಾಕಿ ವೇತನ ಸೋಮವಾರ ಸಂಜೆಯೊಳಗೆ ಪಾವತಿಸಲು ಸೂಚಿಸಲಾಗುತ್ತದೆ. ಮೃತ ಪೌರ ಕಾರ್ಮಿಕ ವೆಂಕಟೇಶ್ ಅವರಿಗೆ ಪರಿಹಾರ ನೀಡುವ ವಿಚಾರದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರೆಂದು ನಗರಸಭೆಯ ದಿನಗೂಲಿ ನೌಕರರ ಸಂಘದ ಮುಖಂಡ ಅಂಬಣ್ಣ ಅರೋಲಿ ತಿಳಿಸಿದ್ದಾರೆ.