ಮಠಾಧೀಶರ ರಾಜಕಾರಣ ಅದೆಷ್ಟು ಸರಿ?
ಕನ್ನಡಪ್ರಭ ವಾರ್ತೆ, ಮುದಗಲ್, ಜೂ.3
ಮಠ- ಮಾನ್ಯಗಳಿಂದ ಸಮಾಜದ ಏಳ್ಗೆ, ಸಮಾಜದ ಅಂಕುಡೊಂಕು ತಿದ್ದುವುದು, ಅಭಿವೃದ್ಧಿಯಾಗಬೇಕೇ ವಿನಃ ರಾಜಕಾರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಮಠಾಧೀಶರು ಚಿಂತನೆ ಮಾಡಬೇಕಾಗಿದೆ ಎಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಲೆಕ್ಕಿಹಾಳ ಅಸಮಾಧಾನ ವ್ಯಕ್ತಪಡಿಸಿದರು.
ಸುಕ್ಷೇತ್ರ ಅಂಕಲಿಮಠದಲ್ಲಿ ನಿರುಪಾಧೀಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಮಠ ಮಾನ್ಯಗಳಿಂದ ಮೊದಲು ಜಾತಿಯ ಲೆಕ್ಕಾಚಾರವಿಲ್ಲದೇ ಧಾರ್ಮಿಕ ಲೆಕ್ಕಾಚಾರ, ವಿಧಿ ವಿಧಾನಗಳು ಇರುತ್ತಿದ್ದವು. ಅಲ್ಲದೆ ಸಮಾಜದ ಅಭಿವೃದ್ಧಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಇತ್ತೀಚೆಗೆ ಜಾತಿಗೊಂದು ಮಠಗಳು ಹುಟ್ಟಿಕೊಂಡು ಧರ್ಮ, ಸಮಾಜದ ಅಭಿವೃದ್ಧಿಯನ್ನು ಬಿಟ್ಟು ರಾಜಕಾರಣದಲ್ಲಿ ಮಠಾಧೀಶರು ನೇರವಾಗಿ ಭಾಗವಹಿಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದರು.
ಸಮಾಜ, ಧಾರ್ಮಿಕ ಅಭಿವೃದ್ಧಿಗೆ ಯತ್ನಿಸಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುನಗುಂದ ಮತಕ್ಷೇತ್ರದಲ್ಲಿ ರಾಜಕೀಯ ಪಕ್ಷದ ಪರವಾಗಿ ಜಾತಿ ರಾಜಕಾರಣವನ್ನು ಮಠಾಧೀಶರು ಮಾಡಿರುವುದು ಶೋಭೆ ತರುವಂತಹದಲ್ಲ. ಮಠಗಳ ಪೀಠಾಧಿಪತಿಗಳು ಸಮಾಜದ ಅಭಿವೃದ್ಧಿಗೆ, ಧಾರ್ಮಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕಿರುವುದು ಇಂದಿನ ಅಗತ್ಯ ಎಂದರು.
ಅಂಕಲಿಮಠವೇ ಮಾದರಿ: ಅಂಕಲಿಮಠದ ಮಠದಲ್ಲಿ ಪೀಠಾಧಿಪತಿ ವೀರಭದ್ರ ಸ್ವಾಮೀಜಿಯಿಂದ ಇಲ್ಲಿಯ ಎಲ್ಲ ಸ್ವಾಮೀಜಿಗಳನ್ನು ನಾನು ನೋಡಿದ್ದೇನೆ. ಇಲ್ಲಿ ಸರ್ವ ಜಾತಿಯ ಜನಾಂಗದವರು ಭಕ್ತರು, ಎಲ್ಲಿಯೂ ಜಾತಿ ರಾಜಕಾರಣ ಮಾಡುವುದು ಕಂಡು ಬರುತ್ತಿಲ್ಲ. ಈ ಮಠದಿಂದ ಭಕ್ತರಿಗೆ ಆಶೀರ್ವಾದ, ಸಮಾಜದ ಅಭಿವೃದ್ಧಿ, ಜ್ಞಾನ ದಾಸೋಹ, ಅನ್ನ ದಾಸೋಹದಂಥ ಕಾರ್ಯಕ್ರಮಗಳು ಜರುಗುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್, ತಾಪಂ ಸದಸ್ಯ ರುದ್ರಗೌಡ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ, ಸದಸ್ಯ ಚೆನ್ನವೀರಪ್ಪಗೌಡ ಪಾಗದ, ನಾಗರಾಳ ವಿಎಸ್‌ಎಸ್‌ಎನ್ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಲಿಂಗರಾಜ, ಸುರೇಂದ್ರಗೌಡ ಆದಾಪೂರ, ಡಾ. ಅಯ್ಯಪ್ಪ ಬನ್ನಿಗೋಳ ಸೇರಿದಂತೆ ಹರ- ಗುರು- ಚರ ಮೂರ್ತಿಗಳು ಉಪಸ್ಥಿತರಿದ್ದರು.
ಉದಯ ಟಿವಿ ವಾರ್ತಾ ವಾಚಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ದೂರದರ್ಶನ ಕಲಾವಿದ ದೇವೆಂದ್ರಕುಮಾರ ಮುಧೋಳ ಪ್ರಾರ್ಥಿಸಿದರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಉದಯ ಟಿವಿಯ ರಾಯಚೂರು ಜಿಲ್ಲಾ ವರದಿಗಾರ ಮಹಾಂತೇಶ ಹಿರೇಮಠ ನೆರವೇರಿಸಿದರು.