ಅಕಾಲಿಕ ಸಾವು; ಪರಿಹಾರ ವಿತರಣೆ
ದೇವದುರ್ಗ: ಹಾವು ಕಚ್ಚಿ ಮೃತನಾದ ಸಾಬಯ್ಯ ಎಂಬಾತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಮಂಜೂರಾದ 1 ಲಕ್ಷ ಪರಿಹಾರವನ್ನು ಅರಕೇರಾ ಜಿಪಂ ಸದಸ್ಯ ದಾನಪ್ಪ ಆಲ್ಕೋಡ್ ಇತ್ತೀಚೆಗೆ ವಿತರಿಸಿದರು. ಪರಿಹಾರ ಮೊತ್ತದ ಚೆಕ್ ಮೃತನ ತಂದೆ ಸೋಮಲಯ್ಯ ಅವರಿಗೆ ಜಿಪಂ ಸದಸ್ಯ ದಾನಪ್ಪ ಆಲ್ಕೋಡ್ ವಿತರಿಸಿದರು. ಕಳೆದ ವರ್ಷ ಜಮೀನಿನಲ್ಲಿ ಬಿತ್ತನೆ ಮಾಡುವಾಗ ಸಾಬಯ್ಯಗೆ ಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದವರಿಗೆ ಕೃಷಿ ಇಲಾಖೆಯಿಂದ ಈ ಪರಿಹಾರ ಮಂಜೂರು ಮಾಡಲಾಗಿತ್ತು. ಸಹಾಯಕ ಕೃಷಿ ಅಧಿಕಾರಿ ಮಹಾದೇವಪ್ಪ ಮತ್ತಿತರರು ಇದ್ದರು.
ಪತ್ನಿ ಸಾವು: ಪತಿ ಆತ್ಮಹತ್ಯೆ
ರಾಯಚೂರು: ಮಾನವಿ ತಾಲೂಕಿನ ಬೆಂಚಮರಡಿ ಗ್ರಾಮದಲ್ಲಿ ಪತ್ನಿಯ ಸಾವಿನಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಪತ್ನಿ ನೀಲಮ್ಮಗೆ ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡಿದ್ದು, ಸ್ವಗ್ರಾಮಕ್ಕೆ ಕರೆ ತರುವ ಮಾರ್ಗದಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ಇದರಿಂದ ಮನನೊಂದ ಆತ ಗ್ರಾಮದ ಹೊರವಲಯದ ಹೊಲದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.