ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜನರ ವಿಶ್ವಾಸವೇ ನ್ಯಾಯಾಂಗದ ಶಕ್ತಿ

Lingaraj Badiger
Updated On : 5 Jun 2013, 11:19 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.4
ಸಾರ್ವಜನಿಕರ ನೈತಿಕತೆಯ ಮೇಲೆ ನ್ಯಾಯಾಂಗ ಕೆಲಸ ಮಾಡಬೇಕಾಗಿದೆ. ಆದರೆ ಜನರು ನೈತಿಕೆಯ ವಿಷಯದಲ್ಲಿ ಅಧೋಗತಿಗೆ ತಲುಪಿದ್ದಾರೆ. ಇದರಿಂದಾಗಿ ನ್ಯಾಯಾಧೀಶರಾಗಿ ಕೆಲಸ ಮಾಡುವುದು ದುಸ್ತರವಾಗಿದೆ. ಜನರ ವಿಶ್ವಾಸವೇ ನ್ಯಾಯಾಂಗದ ಶಕ್ತಿಯಾಗಿದೆ ಎಂದು ರಾಯಚೂರು ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಸ್.ಎಸ್. ಮಿಟ್ಟಲಕೋಡ್ ಹೇಳಿದರು.
ನಗರದಲ್ಲಿ ಮಂಗಳವಾರ ತಾಲೂಕು ವಕೀಲರ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜನರ ಸತ್ಯಕ್ಕೇ ನ್ಯಾಯ: ನ್ಯಾಯಾಧೀಶರು ಕೆಲವೊಮ್ಮೆ ಸತ್ಯವನ್ನು ಕಂಡರೂ ಸಾಕ್ಷ್ಯಾಧಾರಗಳು ಪುಷ್ಟೀಕರಿಸದಿದ್ದರೆ ನ್ಯಾಯಸಮ್ಮತ ತೀರ್ಮಾನ ಕೊಡಲು ಅಸಮರ್ಥರಾಗುತ್ತಾರೆ. ಹೀಗಾಗಿ ಜನತೆ ಗೊತ್ತಿರುವ ವಿಚಾರವನ್ನು ನ್ಯಾಯಾಲಯದೆದುರು ಪ್ರಾಮಾಣಿಕವಾಗಿ ಹೇಳಬೇಕು. ಸತ್ಯಕ್ಕೆ ನ್ಯಾಯ ದೊರಕುತ್ತದೆ. ಇಲ್ಲದಿದ್ದರೆ ಅಸತ್ಯವೇ ವಿಜೃಂಭಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ನ್ಯಾಯದಾನದಲ್ಲಿ ವಿಳಂಬವಾದರೆ ಕಕ್ಷಿದಾರಿಗೆ ತೊಂದರೆಯಾಗುತ್ತದೆ. ನ್ಯಾಯಾಧೀಶರು ಭ್ರಷ್ಟರಾಗದೆ, ಲಂಚ ಪಡೆಯದೆ ಆತ್ಮಸಾಕ್ಷಿಗನುಗುಣವಾಗಿ ಕಾರ್ಯನಿರ್ವಹಿಸಬೇಕು. ಅಂದಾಗ ಜನರಲ್ಲಿ ನ್ಯಾಯಾಂಗದ ಬಗ್ಗೆ ಗೌರವ ಹೆಚ್ಚಾಗುತ್ತದೆ. ಕಿರಿಯ ವಕೀಲರು ಅಧ್ಯಯನಶೀಲರಾಗಬೇಕು. ಹಿಂದಿನಂತೆ ಪುಸ್ತಕಗಳನ್ನು ವಕೀಲರು ಹೆಚ್ಚು ಓದಬೇಕಾಗಿಲ್ಲ. ಬದಲಾಗಿ ತಂತ್ರಜ್ಞಾನ ಬಳಸಿಕೊಂಡು ಸಿಡಿಗಳ ಮೂಲಕ ಪ್ರಕರಣಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕಿರಿಯ ವಕೀಲರು ಕಾರ್ಯಪ್ರವೃತ್ತರಾಗಬೇಕೆಂದು ಕಿವಿ ಮಾತು ಹೇಳಿದರು.
ವಕೀಲರಿಗೆ ಉತ್ತೇಜನ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಮಾತನಾಡಿ, ಮಿಟ್ಟಲಕೋಡ್‌ರ ಅವಧಿಯಲ್ಲಿ ಸಿಂಧನೂರಿಗೆ ನ್ಯಾಯಾಧೀಶರ ನಿವಾಸ ಉದ್ಘಾಟನೆಯಾಯಿತು. ಅವರ ಅವಧಿಯಲ್ಲಿಯೇ ಕಿರಿಯ ವಕೀಲರಿಗೆ ಅನುಕೂಲವಾಗುವ ಕಾನೂನು ಕಾರ್ಯಾಗಾರವು ಜರುಗಿತು. ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಕೀಲರಿಗೆ ಉತ್ತೇಜನ ನೀಡಿದರು ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶ ಮಿಟ್ಟಲಕೋಡ್ ಅವರ ಕುರಿತು ಹಿರಿಯ ನ್ಯಾಯವಾದಿಗಳಾದ ಜಿ.ಎಸ್.ಆರ್.ಕೆ. ರೆಡ್ಡಿ, ಟಿ.ರಾಜಶೇಖರಯ್ಯ, ಕಲ್ಮಂಗಿ ಅಮರೇಗೌಡ, ಎಚ್.ವಿ. ಗುಡಿ ಮಾತನಾಡಿದರು.
ಸನ್ಮಾನ: ರಾಯಚೂರು ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಕಳೆದ ತಿಂಗಳು ವಯೋನಿವೃತ್ತಿ ಹೊಂದಿದ ಎಸ್.ಎಸ್. ಮಿಟ್ಟಲಕೋಡ್, ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಖಾಜಿಮಲಿಕ್ ಅಹ್ಮದ್, ಮಾಜಿ ಖಜಾಂಚಿ ಬಿ.ಚನ್ನಪ್ಪ ಅವರನ್ನು ವಕೀಲರ ಸಂಘದಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಹನುಮೇಶ ಕೊಡ್ಲಿ, ಖಜಾಂಚಿ ಸುರೇಶ ರಡ್ಡಿ ಚನ್ನಳ್ಳಿ ಪಾಲ್ಗೊಂಡಿದ್ದರು. ಎಚ್.ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ನ್ಯಾಯವಾದಿಗಳಾದ ವಿರುಪಾಕ್ಷಪ್ಪ ಗದ್ರಟಗಿ, ಅಬ್ದುಲ್ ಗನಿಸಾಬ, ಮಲ್ಲಿಕಾರ್ಜುನ ಮೈಲಾಪೂರ, ಹನುಮಂತಪ್ಪ ಗುಡಿ, ಬಿ.ಸಿ. ಹಿರೇಮಠ, ಎಚ್.ಪಂಪಾಪತಿ, ಜಿ.ವಿ. ಜೋಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement