ಡಿಸಿ ಅನುಚಿತ ವರ್ತನೆಗೆ ಸಂಘಟನೆಗಳ ಆಕ್ರೋಶ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.4
ರಾಯಚೂರು ನಗರದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿಯಿಲ್ಲ. ವಿವಿಧ ಸಂಘಟನೆಗಳು ಕಳೆದ ಅನೇಕ ತಿಂಗಳಿನಿಂದ ಸಲ್ಲಿಸಿರುವ ಮನವಿಗಳಿಗೆ ಸ್ಪಂದಿಸುವ ಕಾರ್ಯ ಮಾಡದ ಜಿಲ್ಲಾಧಿಕಾರಿ, ನ್ಯಾಯಯುತ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆ ಆರೋಪಿಸಿದೆ.
ಈ ಕುರಿತು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಮುಖಂಡ ಜೆ.ಬಿ. ರಾಜು ಅವರು, ನಗರದಲ್ಲಿನ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹತ್ತಾರು ಬಾರಿ ಹೋರಾಟದ ಮೂಲಕ ಗಮನ ಸೆಳೆಯಲಾಗಿದೆ. ಆದರೆ ಜಿಲ್ಲಾಧಿಕಾರಿ ಮಾತ್ರ ಇದುವರೆಗೆ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಬದಲಿಗೆ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ಸ್ಪಂದಿಸುವ ಗುಣ ಬೆಳೆಸಿಕೊಳ್ಳಲಿ: ನಗರಸಭೆಯ ದಿನಗೂಲಿ ಕಾರ್ಮಿಕ ವೆಂಕಟೇಶ್ ಕಳೆದೊಂದು ತಿಂಗಳ ಹಿಂದೆ ಕರ್ತವ್ಯ ನಿರತನಾಗಿದ್ದ ವೇಳೆ ಮೃತನಾಗಿದ್ದು, ಆತನ ಕುಟುಂಬಕ್ಕೆ ಪರಿಹಾರ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಆ ಬಗ್ಗೆ ಜಿಲ್ಲಾಧಿಕಾರಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದರಿಂದ ಮಾಹಿತಿ ಪಡೆಯಲು ತೆರಳಿದ ಸಂಘಟನೆಗಳ ಪ್ರಮುಖರು ಹಾಗೂ ದಿನಗೂಲಿ ಒಳಚರಂಡಿ ನಿರ್ವಹಿಸುವ ಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿ ಅನುಚಿತವಾಗಿ ವರ್ತಿಸಿದ್ದಾರೆಂದು ದೂರಿದರು.
ಜಿಲ್ಲಾಧಿಕಾರಿಗೆ ಅವರ ಸ್ವಂತ ಜಿಲ್ಲೆಗೆ ವರ್ಗಾವಣೆ ಬೇಕಿದ್ದಲ್ಲಿ ಅವರು ರಾಯಚೂರು ಜನತೆಯೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ಸಂಘಟನೆಗಳು ಎಂದಿಗೂ ಸಹಿಸುವುದಿಲ್ಲ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಹಾಗೂ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸುವ ಮನೋಭಾವ ರೂಢಿಸಿಕೊಳ್ಳುವುದು ಅವಶ್ಯ ಎಂದು ಸಲಹೆ ನೀಡಿದರು.
ಪರಿಹಾರ ನೀಡಿಕೆಯಲ್ಲಿ ವಿಳಂಬ: ಕರ್ತವ್ಯ ನಿರತನಾಗಿದ್ದ ವೇಳೆ ಸಿಬ್ಬಂದಿ ವೆಂಕಟೇಶ ಮೃತನಾಗಿದ್ದು ಪರಿಹಾರ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ನಗರಸಭೆಯ ಕಾರ್ಮಿಕರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಅದರಲ್ಲೂ ಯುಜಿಡಿ ವಿಭಾಗದಲ್ಲಿ ದುಡಿಯುತ್ತಿರುವವರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಸ್ಥಗಿತಗೊಳಿಸಿದ್ದಕ್ಕೆ ಆಡಳಿತ ಉತ್ತರಿಸಬೇಕಿದೆ ಎಂದು ಆಗ್ರಹಿಸಿದರು.
ನಗರದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ನಿರ್ಮಿಸಿದ 18 ಅಪಾರ್ಟ್ಮೆಂಟ್ಗಳ ತೆರವಿಗೆ ಸಂಘಟನೆಗಳು ದೂರು ಸಲ್ಲಿಸಿ ವರ್ಷ ಕಳೆದಿದೆ. ಮಿಸ್ಬಾ ಎಂಟರ್ಪ್ರೈಸಸ್ ಎಂಬ ಖೊಟ್ಟಿ ಹೆಸರಿನ ಸಂಸ್ಥೆಯ ಮೂಲಕ ನಗರಸಭೆಗೆ ಕಂಪ್ಯೂಟರ್ ಸರಬರಾಜು ಮಾಡಿದ ಅಕ್ರಮದ ಬಗ್ಗೆ ದೂರು ಸಲ್ಲಿಸಿ 8 ತಿಂಗಳಾಗಿದೆ. ಆದರೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ದೂರಿಗೆ ಕ್ಯಾರೇ ಎನ್ನುತ್ತಿಲ್ಲ: ನಗರದಲ್ಲಿ ಮಾಜಿ ಶಾಸಕ ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ಆಯೋಜಿಸುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ನಗರಸಭೆಯಿಂದ ಕಳೆದ 3 ವರ್ಷದಲ್ಲಿ ಪ್ರತಿ ವರ್ಷ 6 ಲಕ್ಷ ಪಾವತಿಸಿರುವುದು ಸರ್ಕಾರದ ಮಾರ್ಗಸೂಚಿ ಉಲ್ಲಂಘನೆಯಾಗಿದೆ. ಈ ಬಗ್ಗೆ ದೂರು ಸಲ್ಲಿಸಿ ವರ್ಷ ಗತಿಸಿದೆ ಎಂದು ದೂರಿದರು.
2008ರಿಂದ 2013ರವರೆಗೆ ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸಿದ ಶೇ.22.75ರ ಅನುದಾನ 7.80 ಕೋಟಿ ಬಳಕೆಯಾಗದೇ ಕರ್ತವ್ಯ ಲೋಪ ಎಸಗಿರುವ ಕುರಿತು ದೂರು ಸಲ್ಲಿಸಿ ವರ್ಷ ಕಳೆದಿದೆ. ಅದೇ ರೀತಿ ನಗರಸಭೆಯಿಂದ ನಿರ್ಮಿಸಿದ ವಾಣಿಜ್ಯ ಬಳಕೆ ಮಳಿಗೆಗಳಲ್ಲಿರುವವರು ಬಾಡಿಗೆ ಪಾವತಿಸದಿರುವ ಬಗ್ಗೆ ನಗರಸಭೆ ನಿರ್ಲಕ್ಷ್ಯ ತೋರಿರುವುದರ ಬಗ್ಗೆ ದೂರು ಸಲ್ಲಿಸಿ ವರ್ಷಗಳಾಗಿವೆ. ಆದರೆ ಜಿಲ್ಲಾಧಿಕಾರಿ ಈ ಸಮಸ್ಯೆಗಳತ್ತ ಗಮನ ಹರಿಸಿಲ್ಲ ಎಂದು ಆರೋಪಿಸಿದರು.
ಹೀಗೆ ನಗರದಲ್ಲಿ ಹತ್ತಾರು ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ ಅವರು, ವಿನಾ ಕಾರಣ ಸಂಘಟನೆಗಳ ವಿರುದ್ಧ ಹರಿಹಾದಿದ್ದು ಸರಿಯಲ್ಲ. ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯ ಮಾಡಬೇಕು. ತಪ್ಪಿದಲ್ಲಿ ಸಂಘಟನೆಗಳು ಅವರ ವಿರುದ್ಧವೇ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಅನಿಲ್ಕುಮಾರ್, ಹೇಮರಾಜ ಅಸ್ಕಿಹಾಳ, ಜನಾರ್ದನ ಅರಳಿಬೆಂಚಿ ಸೇರಿದಂತೆ ಅನೇಕರಿದ್ದರು.