ಧರ್ಮದಲ್ಲಿ ರಾಜಕೀಯ ಸಲ್ಲದು
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.5
ರಾಜಕೀಯ ಕ್ಷೇತ್ರವು ಕಲುಷಿತಗೊಂಡಿದ್ದು, ಧರ್ಮ ಮತ್ತು ಜಾತಿಗಳ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡುತ್ತಿದೆ. ಧರ್ಮದ ವಿಚಾರದಲ್ಲಿ ರಾಜಕೀಯದ ಹಸ್ತಕ್ಷೇಪ ಹೆಚ್ಚಾಗಿದ್ದು, ಅದರಿಂದ ವೈಮನಸ್ಸು ಹೆಚ್ಚುತ್ತಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳು ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮ ಮತ್ತು ಜಾತಿ ಮಧ್ಯೆ ಸಂಘರ್ಷ ದೇಶಕ್ಕೆ ಒಳಿತನ್ನು ತರಲಾರದು. ದೇಶದ ಭವಿಷ್ಯದ ದೃಷ್ಟಿಯಿಂದ ಈ ಸಂಘರ್ಷಕ್ಕೆ ಕೊನೆ ಹಾಡಬೇಕಿದೆ. ರಾಜಕೀಯ ವ್ಯಕ್ತಿಗಳೂ ಧರ್ಮ ಕಾರ್ಯಕ್ರಮದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಹೇಳಿದರು.
ಸಾಮರಸ್ಯ ಬೆಳೆಸಲು ಯತ್ನ: ಶ್ರೀರಂಭಾಪುರಿ ಪೀಠವು ಕಳೆದ ಅನೇಕ ವರ್ಷಗಳಿಂದ ಎಲ್ಲ ಜಾತಿ ಜನಾಂಗದವರ ಮಧ್ಯೆ ಸಾಮರಸ್ಯದ ಮೂಲಕ ಪ್ರಗತಿಯತ್ತ ಸಾಗುವ ಮಾರ್ಗವನ್ನು ಬೋಧಿಸುತ್ತಿದೆ. ಸಮಾಜದ ಎಲ್ಲ ಸಮುದಾಯಗಳ ವಿಶ್ವಾಸವನ್ನು ರಂಭಾಪುರಿ ಪೀಠ ಗಳಿಸಿದೆ ಎಂದ ಅವರು, ಧಾರ್ಮಿಕ ಆಚಾರ- ವಿಚಾರಗಳ ಪ್ರಸಾರ ಕಾರ್ಯದಲ್ಲಿ ಪೀಠ ತೊಡಗಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಹತ್ತಾರು ಸವಾಲುಗಳಿದ್ದು, ಆರಂಭದಲ್ಲಿಯೇ ಗುಟ್ಕಾ ನಿಷೇಧ ಕ್ರಮ ಕೈಗೊಳ್ಳುವ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಸರ್ಕಾರದ ಕ್ರಮಕ್ಕೆ ರಂಭಾಪುರಿ ಪೀಠ ಸ್ವಾಗತಿಸುತ್ತದೆ. ಆದರೆ ಇದೇ ವೇಳೆ ಅಡಕೆ ಬೆಳೆಗಾರರ ಹಿತ ಕಾಯುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮದ್ಯದ ಮೇಲೂ ನಿಷೇಧ ಹೇರಲಿ: ಸಿದ್ದರಾಮಯ್ಯ ಅವರು ಗುಟ್ಕಾ ನಿಷೇಧಿಸಿದ ಮಾದರಿಯಲ್ಲಿಯೇ ಮದ್ಯದ ಮೇಲೂ ನಿಷೇಧ ಹೇರಬೇಕು. ಆ ಮೂಲಕ ಬಡ ಕುಟುಂಬಗಳ ಸಂರಕ್ಷಣೆ ಕಾರ್ಯ ಮಾಡಬೇಕಿದೆ. ಆಗ ಮಾತ್ರ ಸಾಮಾಜಿಕ ವ್ಯವಸ್ಥೆ ಸುಧಾರಣೆ ಸಾಧ್ಯ ಎಂದು ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಣೆಗೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮವೇ ಆಗಿದೆ. ಆದರೆ ಅದರ ಸಾಧಕ- ಬಾಧಕಗಳ ಬಗ್ಗೆ ಪರಿಶೀಲಿಸುವುದು ಒಳಿತು. ಕಳಪೆ ಗುಣಮಟ್ಟದ ಅಕ್ಕಿ ವಿತರಿಸಿದಲ್ಲಿ ಆಗುವ ಅನಾಹುತಗಳ ಬಗ್ಗೆಯೂ ಸರ್ಕಾರ ಗಮನವಿಡಬೇಕಿದೆ. ಹಾಗೆಯೇ ಸರ್ಕಾರದ ಈ ಯೋಜನೆಯಿಂದ ಕೂಲಿ ಕಾರ್ಮಿಕರ ಕೊರತೆ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಅನೇಕರು ಮಹಾನಗರಗಳಲ್ಲಿ ಬದುಕು ಕಂಡುಕೊಂಡಿದ್ದಾರೆ. ಅದರಿಂದ ಕೂಲಿಕಾರ್ಮಿಕರ ಕೊರತೆ ಸಾಕಷ್ಟು ಉಂಟಾಗಿದೆ. ಪ್ರಸ್ತುತ ಹೊಸ ಯೋಜನೆ ಜಾರಿಯಿಂದ ದುಡಿಯುವ ಕೈಗಳು ಕೆಲಸಕ್ಕೆ ಆಸಕ್ತಿ ತೋರದಿರುವ ಸಾಧ್ಯತೆ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ನೀರಾವರಿ ಯೋಜನೆಗಳ ಜಾರಿ, ಕೈಗಾರಿಕೆಗಳ ಸ್ಥಾಪನೆ ಮೂಲಕ ಪ್ರಗತಿಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದ ಅವರು, ಈಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿವಾರು ಮಠಗಳ ಸಂಖ್ಯೆ ಹೆಚ್ಚಳ ಕಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲ ಜಾತಿ ಧರ್ಮಗಳಲ್ಲಿ ಮಠಗಳ ಸ್ಥಾಪನೆಯ ಪ್ರವೃತ್ತಿ ಹೆಚ್ಚುತ್ತಿದ್ದು ಅದರಿಂದ ಆರ್ಥಿಕ ಮುಗ್ಗಟ್ಟಿಗೆ ಅಂಥ ಮಠಗಳು ಸಿಲುಕುತ್ತಿವೆ. ಅಷ್ಟೇ ಅಲ್ಲ ಉತ್ತರಾಧಿಕಾರಿಗಳ ಕೊರತೆಯೂ ಕಾಡುತ್ತಿರುವುದು ಅನೇಕ ಸಂದರ್ಭದಲ್ಲಿ ಸಾಬೀತಾಗಿದೆ ಎಂದು ಅವರು ಹೇಳಿದರು.
ಮಠಗಳ ಹೆಸರಿನಲ್ಲಿ ಆಶ್ರಮ, ಸ್ವಾಮೀಜಿಗಳ ಸೋಗಿನಲ್ಲಿ ಕಪಟ ಸನ್ಯಾಸಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಪ್ರಗತಿಗೆ ಮಾರಕ. ಧಾರ್ಮಿಕ ಹೊಣೆಗಾರಿಕೆಯಿಲ್ಲದವರೂ ಕಾವಿ ಧರಿಸುವ ಮೂಲಕ ಅಪಚಾರ ಎಸಗುತ್ತಿದ್ದಾರೆ. ಕೇವಲ ಕಾವಿ ಧರಿಸಿದ ಮಾತ್ರಕ್ಕೆ ಸ್ವಾಮೀಜಿ ಎಂದು ಕರೆದು ನಂಬುವುದು ಸರಿಯಲ್ಲ ಎಂದು ಸಲಹೆ ನೀಡಿದರು. ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು, ಬಸವರಾಜಗೌಡ ಬಂಡಿ ಇದ್ದರು.