ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾನೂನು ಅರಿವು; ಸಾಕ್ಷರತಾ ರಥದ ಆಶಯ

Lingaraj Badiger
Updated On : 7 Jun 2013, 11:00 am

ರಾಯಚೂರು: ಜಿಲ್ಲೆಯಲ್ಲಿ ಕಾನೂನು ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಜನರ ಬಳಿಗೆ ತೆರಳಿ ಅಲ್ಲಿಯೇ ಪ್ರಕರಣಗಳ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸುವುದು ಕಾನೂನು ಸಾಕ್ಷರತಾ ರಥದ ಆಶಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜೆ.ಸತೀಶ ಸಿಂಗ್ ಹೇಳಿದರು.
ನಗರದಲ್ಲಿ ಗುರುವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿರುವ ಕಾನೂನು ಸಾಕ್ಷರತಾ ರಥ, ಜನತಾ ನ್ಯಾಯಾಲಯ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳದಲ್ಲೇ ವಿಚಾರಣೆ: ಸಾಕ್ಷರತಾ ರಥವು ಜಿಲ್ಲೆಯ ಎಲ್ಲೆಡೆ ಸಂಚರಿಸಿ ಅಲ್ಲಿನ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದೆ. ಅದೇ ವೇಳೆ ಆಯಾ ಭಾಗದ ವ್ಯಾಜ್ಯಗಳ ಇತ್ಯರ್ಥಕ್ಕೆ ಸ್ಥಳದಲ್ಲಿಯೇ ವಿಚಾರಣೆ ನಡೆಸಲಾಗುತ್ತದೆ. ಜತೆಗೆ ವಿವಿಧ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲಿದೆ ಎಂದು ಹೇಳಿದರು.
ಸಾಕ್ಷರತಾ ರಥದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿರಲಿದ್ದು ವಾಹನ ಚಾಲಕರು ಹೊಂದರಬೇಕಾದ ಚಾಲನಾ ಪ್ರಮಾಣ ಪತ್ರ ಮತ್ತು ಅದನ್ನು ಪಡೆಯುವ ಪದ್ಧತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಿದ್ದಾರೆ. ಅದೇ ರೀತಿ  ಸಂಚಾರಿ ನಿಯಮಗಳ ಬಗ್ಗೆ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಜನತೆಗೆ ಮಾಹಿತಿ ನೀಡಲಿದ್ದಾರೆಂದು ಹೇಳಿದರು.
ಗ್ರಾಮೀಣರಿಗೆ ಕಾನೂನು ಅರಿವು: ಕಾನೂನು ಸಾಕ್ಷರತಾ ರಥದಲ್ಲಿಯೇ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರಿರಲಿದ್ದು, ಅವರು ಸ್ಥಳೀಯ ವ್ಯಾಜ್ಯಗಳನ್ನು ಅಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಾನೂನಿನ ಅರಿವು ಮೂಡಿಸುವ ಮೂಲಕ ನೆರವು ನೀಡುವ ಪ್ರಕ್ರಿಯೆ ಇದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಹಿರಿಯ ವ್ಯವಹಾರಿಕ ನ್ಯಾಯಾಧೀಶರಾದ ಮಹಮ್ಮದ್ ಮುಜಾಹಿದುಲ್ಲಾ, ಕಾಡ್ಲೂರು ಸತ್ಯನಾರಾಯಣಾಚಾರ್ಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಹನುಮಂತಪ್ಪ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಎಸ್.ಮುತ್ತೂರು, ವಕೀಲರ ಸಂಘದ ಖಜಾಂಚಿ ವೀರೇಶ್ ಸೇರಿದಂತೆ ಅನೇಕರಿದ್ದರು.
ಈ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ, ಕಾನೂನು ಅರಿವು ನೆರವು ಕಾರ್ಯಕ್ರಮವು ನಗರದಲ್ಲಿ ಮೂರು ದಿನಗಳ ಕಾಲ ಸಂಚರಿಸಲಿದೆ ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement