ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗಾಢನಿದ್ರೆಯಲ್ಲಿ ಸಿಂಧನೂರು ನಗರಸಭೆ

Lingaraj Badiger
Updated On : 7 Jun 2013, 11:00 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.6
ಅಲ್ಪ ಮಳೆ ಬಂದರೂ ಸಾಕು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕೆಎಚ್‌ಬಿ ಕಾಲೋನಿಯ ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಗೆ, ನಗರಸಭೆಗೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳಾದ ನಿವೃತ್ತ ತಹಸೀಲ್ದಾರ್ ಅಬ್ದುಲ್ ಕರೀಂಸಾಬ, ನೌಕರರ ಸಂಘದ ಮಾಜಿ ಅಧ್ಯಕ್ಷ ವಿ.ಬಸವರಾಜ ಇತರರು ದೂರಿದ್ದಾರೆ.
ಮಳೆ ಬಂದರೆ ಇಲ್ಲಿನ ನಿವಾಸಿಗಳಲ್ಲಿ ಆತಂಕ ಮನೆಮಾಡುತ್ತದೆ. ಖದಿರಿಯಾ ಕಾಲೋನಿ, ಆದರ್ಶ ಕಾಲೋನಿ, ವೆಂಕಟೇಶ್ವರ ನಗರ ಮತ್ತು ಕೆಎಚ್‌ಬಿ ಕಾಲೋನಿಗಳ ನೀರು ಸಣ್ಣವ್ಯಾಸದ ಚರಂಡಿಯೊಳಗೆ ಹೋಗಬೇಕಾಗಿದೆ.
 ನಗರಸಭೆಯವರು ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದೇ ಇದಕ್ಕೆ ಕಾರಣ.
ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ: ಇಲ್ಲಿ ಚಿಕ್ಕ ಗಾತ್ರದ ಚರಂಡಿಗಳನ್ನು ದೊಡ್ಡ ಗಾತ್ರದ ಚರಂಡಿಗೆ ಜೋಡಣೆ ಮಾಡಿದರೆ ನೀರು ಸರಾಗವಾಗಿ ಹರಿಯುತ್ತದೆ. ಆದರಿಲ್ಲಿ ಇದಕ್ಕೆ ತದ್ವಿರುದ್ಧವಾಗಿ ಜೋಡಣೆ ಮಾಡಲಾಗಿದೆ. ನಾಲ್ಕು ವಾರ್ಡ್‌ಗಳ ಮಳೆ ನೀರು, ಚರಂಡಿಗಳ ನೀರು ಸೇರಿದಂತೆ ನದಿಯೋಪಾದಿಯಲ್ಲಿ ಹರಿಯುತ್ತದೆ. ಈ ನೀರು ಹರಿಯಲು ಅಗತ್ಯ ಜಾಗವಿಲ್ಲದೆ ಕೆಎಚ್‌ಬಿ ಕಾಲೋನಿಯ ಮನೆಗಳಿಗೆ ನುಗ್ಗಿ ಎಲ್ಲ ವಸ್ತುಗಳನ್ನು ಆಪೋಶನ ಮಾಡಿದೆ.
ಮಕ್ಕಳು ಕೊಚ್ಚಿ ಹೋಗುವ ಭೀತಿ: ನಗರಸಭೆ ಸದಸ್ಯರಿಗೆ, ತಾಂತ್ರಿಕ ವರ್ಗದವರಿಗೆ ಅನೇಕ ಬಾರಿ ಹೇಳಿದರೂ ಸ್ಪಂದಿಸಿಲ್ಲ. ಪೌರಾಯುಕ್ತ ನಾಸೀರ್ ಅಲಿ, ಲಿಂಗಸ್ಗೂರು ಉಪ ವಿಭಾಗದ ಸಹಾಯಕ ಆಯುಕ್ತ ಟಿ.ಯೋಗೀಶ ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ ಬಂದರೂ ಕ್ರಮ ಕೈಗೊಂಡಿಲ್ಲ. ಕೆಎಚ್‌ಬಿ ಕಾಲೋನಿಯ ನಿವಾಸಿಗಳು ತಮ್ಮ ಮನೆಗಳ ಪಕ್ಕದಲ್ಲಿ ದೊಡ್ಡ ಮಣ್ಣಿನ ಒಡ್ಡನ್ನು ಹಾಕಿಕೊಳ್ಳದಿದ್ದಲ್ಲಿ ಮನೆಗಳಲ್ಲಿನ ಸಣ್ಣಪುಟ್ಟ ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವಿವರಿಸಿದ್ದಾರೆ.
ಮತ್ತೆ ಮನವಿ: ನಗರಸಭೆ ಅಧಿಕಾರಿಗಳು ಕ್ರಮ ಕೈಗೊಂಡು ವೈಜ್ಞಾನಿಕವಾಗಿ ದೊಡ್ಡವ್ಯಾಸದ ಚರಂಡಿ ನಿರ್ಮಿಸಿ  ಎಲ್ಲ ವಾರ್ಡ್‌ಗಳ ನೀರನ್ನು ಸರಾಗವಾಗಿ ಹರಿಸಲು ವ್ಯವಸ್ಥೆ ಕಲ್ಪಿಸಬೇಕು.
 ಈ ಬಗ್ಗೆ ನೂತನ ಶಾಸಕರು ಸ್ಥಳ ಪರಿಶೀಲಿಸಲು ಅಧಿಕಾರಿಗಳೊಂದಿಗೆ ಆಗಮಿಸಬೇಕು. ಇಲ್ಲದಿದ್ದರೆ ನಿವಾಸಿಗಳೆಲ್ಲ ನಗರಸಭೆ ಎದುರು ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಅಲ್ಲಿನ ಸುಮಾರು 12ಕ್ಕೂ ಹೆಚ್ಚು ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.

ಸೆ. 1ರೊಳಗೆ ಲೆಕ್ಕ ಪರಿಶೋಧನೆ; ಸೂಚನೆ
ರಾಯಚೂರು: ಜಿಲ್ಲೆಯಲ್ಲಿನ ಎಲ್ಲ ಸಹಕಾರ ಸಂಘಗಳವರು ಪ್ರತಿ ವರ್ಷ ಸೆ.1ರೊಳಗೆ ತಮ್ಮ ಸಂಘದ ಲೆಕ್ಕ ಪರಿಶೋಧನೆ ಕೈಗೊಳ್ಳುವಂತೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರ ಕಚೇರಿ ತಿಳಿಸಿದೆ.
2012- 13ನೇ ಸಾಲಿನ ಲೆಕ್ಕ ಪರಿಶೋಧನೆಗೆ ಈಗಾಗಲೇ ಲೆಕ್ಕ ಪರಿಶೋಧಕರ ಪಟ್ಟಿಯನ್ನು ಸಹಕಾರ ಸಂಘಗಳಿಗೆ ಕಳಿಸಿಕೊಡಲಾಗಿದೆ. ಸದರಿ ಪಟ್ಟಿಯಲ್ಲಿ ನಮೂದಿಸಿದ ಮೂವರು ಲೆಕ್ಕ ಪರಿಶೋಧಕರ ಪೈಕಿ ಒಬ್ಬರನ್ನು ನೇಮಕ ಮಾಡಿಕೊಂಡು ನಡಾವಳಿಯ ಮಾಹಿತಿಯನ್ನು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರ ಕಚೇರಿಗೆ ಕಳುಹಿಸುವಂತೆ ಸೂಚಿಸಿದ್ದಾರೆ.

'ಮಲೇರಿಯಾ ನಿಯಂತ್ರಿಸಿ'
ರಾಯಚೂರು: ಜಿಲ್ಲೆಯಲ್ಲಿ ಮಲೇರಿಯಾ ರೋಗ ಹರಡುವಿಕೆ ತಡೆಗೆ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಕೊಳಚೆ ಪ್ರದೇಶದಲ್ಲಿ ನಿಂತ ನೀರಿನಿಂದ ಮಲೇರಿಯಾ ರೋಗ ಹರಡುವ ಸೊಳ್ಳೆ ಉತ್ಪತ್ತಿಯಾಗುತ್ತವೆ.
ಈ ಹಿನ್ನೆಲೆಯಲ್ಲಿ ಕೊಳಚೆ ನೀರಿನ ಸಂಗ್ರಹಕ್ಕೆ ಅವಕಾಶ ನೀಡಬಾರದು. ಯಾವುದೇ ರೀತಿಯ ಜ್ವರ ಮಲೇರಿಯಾ ಆಗಿರುವ ಸಾಧ್ಯತೆಯಿದ್ದು, ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಮನವಿ ಮಾಡಿದೆ.
 ಮಲೇರಿಯಾ ರೋಗ ಕಂಡುಬಂದಲ್ಲಿ ಆರೋಗ್ಯ ಸಹಾಯಕರಲ್ಲಿ, ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಮಾತ್ರೆಗಳು ಲಭ್ಯವಿರುತ್ತವೆ.
ಜನತೆ ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಮನೆ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.

ಮತದಾರ ಪಟ್ಟಿ: ಆಕ್ಷೇಪಣೆ ಸಲ್ಲಿಸಲು ಸೂಚನೆ
ಗುಲ್ಬರ್ಗ: ರಾಜ್ಯ ವಿಜ್ಞಾನ ಪರಿಷತ್ತಿನ 2013ರ ತ್ರೈವಾರ್ಷಿಕ ಚುನಾವಣೆಗೆ ಸಂಬಂಧಪಟ್ಟಂತೆ ಮತದಾರರ ಪಟ್ಟಿಯನ್ನು ಪರಿಷತ್ತಿನ ಅಂತರ್ಜಾಲ ಢಿಢಿಢಿ.್ಞ್ಠಢಠ.್ಟ್ಠ್ಜನಲ್ಲಿ ಜೂ.15ರಂದು ಪ್ರಕಟಿಸಲಾಗುವುದು.
 ಸದರಿ ಪಟ್ಟಿಯಲ್ಲಿ ತಿದ್ದುಪಡಿ ಅಥವಾ ಅಕ್ಷೇಪಣೆ ಏನಾದರೂ ಇದ್ದಲ್ಲಿ ಸದಸ್ಯರು ಜು.1ರೊಳಗಾಗಿ ಅಂಚೆ ಮೂಲಕ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಭವನ , ನಂ.24/2, 21ನೇ ಮುಖ್ಯರಸ್ತೆ ಬನಶಂಕರಿ 2ನೇ ಹಂತ ಬೆಂಗಳೂರು-560070 ಕಚೇರಿಗೆ ಅಥವಾ ಇ-ಮೇಲ್ ವಿಳಾಸ- ್ಞ್ಠಢಠ.್ಝಟಿಜ್ಟಿಣ್ಜಟಛ್ಝಟ.್ಛ್ಟಟ ಮೂಲಕ ಕಳುಹಿಸಬೇಕೆಂದು ಗೌರವ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement