ಹತ್ತಿ ವಹಿವಾಟು: ಮಾಹಿತಿ ಸಂಗ್ರಹಣೆಗೆ ಚಾಲನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.6
ಕೇಂದ್ರ ಸರ್ಕಾರವು ದೇಶದಲ್ಲಿ ಹತ್ತಿ ಉತ್ಪಾದನೆ ಮತ್ತು ವಹಿವಾಟು ಬಗ್ಗೆ ಮಾಹಿತಿ ಸಂಗ್ರಹಣೆಗೆ 2008ರಲ್ಲಿ ಮಸೂದೆ ಜಾರಿಗೆ ತಂದಿದ್ದು, ಅದರಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಹತ್ತಿ ಮಿಲ್ ಮಾಲೀಕರು ಹಾಗೂ ಹತ್ತಿ ವಹಿವಾಟು ನಡೆಸುವವರು ಅಗತ್ಯ ಮಾಹಿತಿ ಪ್ರತಿ ತಿಂಗಳು ಒದಗಿಸಬೇಕಿದೆ ಎಂದು ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಕೃಷ್ಣಪ್ರಸಾದ್ ತಿಳಿಸಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಗುರುವಾರ ದಿ.ಗಂಜ್ ಮರ್ಚಂಟ್ ಅಸೋಸಿಯೇಷನ್ ಸಹಯೋಗ ದಲ್ಲಿ ಆಯೋಜಿಸಿದ್ದ ಮಾಹಿತಿ ನೀಡಿಕೆ ಕಾರ್ಯಾಗಾರದಲ್ಲಿ ಮಾತನಾಡಿ, ಸದ್ಯ ಹತ್ತಿ ಬೆಳೆಗಾರರು, ಹತ್ತಿ ಮಿಲ್ ಗಳ ಮಾಲೀಕರು ಹಾಗೂ ವರ್ತಕರ ಮಧ್ಯೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಅದರಿಂದಾಗಿ ಉದ್ಯಮದಲ್ಲಿ ಎಲ್ಲರೂ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾಹಿತಿ ಸಂಗ್ರಹ: ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಜವಳಿ ವಿತರಣೆ ಯೋಜನೆ ನಿಗದಿಪಡಿಸಲು ಹತ್ತಿ ವಹಿವಾಟು ನಡೆಸುವ ವರ್ತಕರು ಹಾಗೂ ಹತ್ತಿ ಮಿಲ್ ಮಾಲೀಕರಿಂದ ಕೆಲ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. 2008ರಲ್ಲಿಯೇ ಮಸೂದೆ ಜಾರಿಗೆ ತಂದಿದ್ದು, ಅದರಂತೆ ಹತ್ತಿ ಮಿಲ್ ಮಾಲೀಕರು, ವರ್ತಕರು, ರಫ್ತುದಾರರು, ಆಮದು ಮಾಡಿಕೊಳ್ಳುವವರು ತಮ್ಮ ಸಂಸ್ಥೆಯ ವಿವರಗಳನ್ನು ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ನೀಡಬೇಕಿದೆ ಎಂದು ಹೇಳಿದರು.
ಹತ್ತಿ ಉದ್ಯಮದಲ್ಲಿರುವ ಎಲ್ಲರೂ ಸಚಿವಾಲಯದಲ್ಲಿ ಮೊದಲು ಹೆಸರು ಮತ್ತು ಸಂಸ್ಥೆಯ ಎಲ್ಲ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಆನಂತರದಲ್ಲಿ ಪ್ರತಿ ತಿಂಗಳು ಅವರು ನಡೆಸುವ ವಹಿವಾಟಿನ ವಿವರಗಳನ್ನು ಕಚೇರಿಗೆ ಒದಗಿಸುವ ಮೂಲಕ ಮಾಹಿತಿ ನೀಡಬೇಕೆಂದು ಹೇಳಿದರು.
ಅನುಕೂಲಕರ ಪರಿಸರ ನಿರ್ಮಾಣ ಉದ್ದೇಶ: ಹತ್ತಿ ಮಿಲ್, ವರ್ತಕರ ಬಳಿಯಿರುವ ಹತ್ತಿ ಬೇಲ್‌ಗಳ ದಾಸ್ತಾನು, ಮಾರಾಟದ ಪ್ರಮಾಣ, ಆರಂಭಿಕ ದಾಸ್ತಾನು ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮಾಹಿತಿ ಸಂಗ್ರಹಿಸುವ ಮೂಲಕ ಹತ್ತಿ ವಹಿವಾಟು ನಡೆಸುವ ವರ್ತಕರು, ಹತ್ತಿ ಮಿಲ್‌ಗಳ ಮಾಲೀಕರು ಹಾಗೂ ಹತ್ತಿ ಬೆಳೆಗಾರರಿಗೆ ಅನುಕೂಲಕರ ಪರಿಸರ ನಿರ್ಮಾಣಕ್ಕೆ ರಾಷ್ಟ್ರೀಯ ಜವಳಿ ಯೋಜನೆ ನಿಗದಿಗೆ ನೆರವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ದೇಶದಲ್ಲಿ ಬೆಳೆಯುವ ಹತ್ತಿ ಪ್ರಮಾಣ, ಆಮದು ಪ್ರಮಾಣ, ರಫ್ತಿನ ಪ್ರಮಾದ ಸಮಗ್ರ ಚಿತ್ರಣ ಲಭ್ಯವಾಗಲಿದೆ. ಅದರಿಂದ ನೈಜ ಹತ್ತಿ ಉತ್ಪಾದನೆ ದಾಖಲೆ ನಿರ್ವಹಣೆ ಸಾಧ್ಯವಾಗಲಿದೆ ಎಂದು ಕೃಷ್ಣ ಪ್ರಸಾದ್ ತಿಳಿಸಿದರು.
15ರ ಗಡುವು: ಸದ್ಯ ಪ್ರತಿ ತಿಂಗಳ ವರದಿಯನ್ನು ವರ್ತಕರು ಅದರ ಮುಂದಿನ ತಿಂಗಳ 15ನೇ ತಾರೀಕಿನೊಳಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಮಾಹಿತಿಯೊದಗಿಸಬೇಕು. ಶೀಘ್ರದಲ್ಲಿಯೇ ಈ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಪರಿವರ್ತಿಸಲಾಗುತ್ತದೆ. ಆ ಮೂಲಕ ವರ್ತಕರಿಗೆ ಹಾಗೂ ಉದ್ಯಮಿಗಳಿಗೆ ಮಾಹಿತಿ ನೀಡುವುದು ಸರಳೀಕರಣಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿದ್ದ ವಿವಿಧ ಹತ್ತಿ ಗಿರಣಿಗಳ ಮಾಲೀಕರು ಹಾಗೂ ವರ್ತಕರು ಮಾಹಿತಿ ನೀಡಿಕೆಗೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಾಗಾರದಲ್ಲಿ ಹುಬ್ಬಳ್ಳಿಯ ಭಾರತೀಯ ಹತ್ತಿ ನಿಗಮದ ಸಹಾಯಕ ವ್ಯವಸ್ಥಾಪಕ ಸಂಜಯ್ ತ್ರಿವೇದಿ, ಗಂಜ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಉದ್ಯಮಿಗಳಾದ ಅಶೋಕ ಕುಮಾರ್ ವರ್ಮಾ, ವೆಂಕಟರಮಣ ರೆಡ್ಡಿ ಸೇರಿದಂತೆ ಅನೇಕರಿದ್ದರು.
ಬಿಟಿ ಹತ್ತಿ ಬಿತ್ತನೆ ಬೀಜ: ಕೃಷಿ ವಿವಿ ಶಿಫಾರಸು
ರಾಯಚೂರು: ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಬಿಟಿ ಹತ್ತಿ ಹೈಬ್ರಿಡ್ ತಳಿಗಳನ್ನು ರಾಯಚೂರು ಕೃಷಿ ವಿವಿ ಸಂಶೋಧನಾ ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಿದ್ದು, ಅವುಗಳು ಹೆಚ್ಚಿನ ಇಳುವರಿ ನೀಡುವ ತಳಿಗಳಾಗಿವೆ ಎಂದು ಕೃಷಿ ವಿವಿ ತಿಳಿಸಿದೆ.
2012-13ನೇ ಸಾಲಿನಲ್ಲಿ ವಿವಿಯಿಂದ ವಿವಿಧ ತಳಿಗಳ ಕೂಲಂಕುಷ ಮೌಲ್ಯಮಾಪನ ನಡೆಸಿದ್ದು, ಹೈ.ಕ. ಭಾಗದ ಆರು ಜಿಲ್ಲೆಗಳಲ್ಲಿ ಬೆಳೆಯಲು ಯೋಗ್ಯವಾಗಿವೆ.
ಜಾಡೋ (ಕೆಸಿಎಚ್-14ಕೆ59) ಬಿಜಿ-11, ಬಿಂದಾಸ್ 7213, ಮಾಲಿನಿ(ಎನ್ ಸಿ ಎಸ್ 9015), ಪೋಲಾರಿಸ್(ಜೆಡ್‌ಸಿಎಸ್ 9015), ಆರ್ಯಾ 12, ಸರಸ್ವತಿ, ಅಜೀತ್-33, ಎಟಿಎಂ, ಡೆನಿಂ (ಪಿಆರ್ ಸಿಎಚ್-703)ಎಂಆರ್ ಸಿ-7351, 7347, 7201, 7383, ಎನ್‌ಎಸ್‌ಸಿ- 955, ಎಸ್‌ಪಿ- 7149 ಹಾಗೂ ರಾಶಿ- 668 ತಳಿಗಳು ಹೆಚ್ಚಿನ ಇಳುವರಿ ನೀಡುತ್ತವೆ ಎಂದು ವಿವಿಯ ಕೃಷಿ ಸಂಶೋಧನಾ ಕೇಂದ್ರ ತಿಳಿಸಿದೆ.