ಹೋರಾಟಕ್ಕೆ ವಿರೋಧಿಸಿದ ಸದಸ್ಯರ ವರ್ತನೆಗೆ ಖಂಡನೆ
ರಾಯಚೂರು: ಬಾಕಿ ವೇತನ ಮತ್ತು ನಗರಸಭೆಯ ದಿನಗೂಲಿ ಕಾರ್ಮಿಕ ದಿ.ವೆಂಕಟೇಶ ಅವರ ಕುಟುಂಬಕ್ಕೆ ಪರಿಹಾರಕ್ಕೆ ಕೋರಿ ನಗರಸಭೆಯ ದಿನಗೂಲಿ ನೌಕರರ ಸಂಘವು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳದಂತೆ ಕಾರ್ಮಿಕರಿಗೆ ತಾಕೀತು ಮಾಡುತ್ತಿರುವ ನಗರಸಭೆಯ ಸದಸ್ಯ ಜಯಣ್ಣ ಅವರ ವರ್ತನೆಯನ್ನು ಸಂಘ ತೀವ್ರ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಜೆ.ಬಿ.ರಾಜು, ಅಂಬಣ್ಣ ಅರೋಲಿಕರ್, ಜನಾರ್ದನ ಹಳ್ಳಿಬೆಂಚಿ ಮತ್ತಿತರರು, ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಸಭೆಯ ದಿನಗೂಲಿ ನೌಕರರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳದಂತೆ ನೌಕರರಿಗೆ ನಗರಸಭೆ ಸದಸ್ಯ ಜಯಣ್ಣ ಎಚ್ಚರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸಂಘಟನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆಂದು ದೂರಿದ್ದಾರೆ.
ಇದುವರೆಗೆ ಅನೇಕ ಸಂದರ್ಭದಲ್ಲಿ ಸದಸ್ಯ ಜಯಣ್ಣ ಅವರು ನಗರಸಭೆಯ ದಿನಗೂಲಿ ಕಾರ್ಮಿಕರ ಕಾಯಂಗೆ ಸಭೆಯಲ್ಲಿ ನಿರ್ಧಾರ ಕೈಗೊಂಡ ನಂತರದಲ್ಲಿ ಕಾರ್ಮಿಕರ ಪರ ಕಾರ್ಯನಿರ್ವಹಿಸಿಲ್ಲ. ಅದೇ ರೀತಿ ಕಳೆದ ನಾಲ್ಕೈದು ವರ್ಷಗಳಲ್ಲಿ 9 ದಿನಗೂಲಿ ನೌಕರರು ಮೃತಪಟ್ಟಿದ್ದರೂ ಪರಿಹಾರ ನೀಡಿಕೆಗೆ ಕ್ರಮ ಕೈಗೊಂಡಿಲ್ಲ. ಸದ್ಯ ನೌಕರರ ಹೋರಾಟ ಬೆಂಬಲಿಸುವ ಬದಲಿಗೆ ಅವರು ನೌಕರರನ್ನು ಪಾಲ್ಗೊಳ್ಳದ್ತಂತೆ ತಾಕೀತು ಮಾಡುತ್ತಿರುವುದು ಸರಿಯಲ್ಲ. ಕಾರ್ಮಿಕರ ಮಧ್ಯೆ ಒಡಕು ಸೃಷ್ಟಿಸುವ ರಾಜಕಾರಣ ಮಾಡದಂತೆ ಎಂದು ಎಚ್ಚರಿಸಿದ್ದಾರೆ.
ಸಿಐಟಿಯು ಬೆಂಬಲ
ರಾಯಚೂರು: ನಗರಸಭೆಯ ದಿನಗೂಲಿ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸಿಐಟಿಯು ಜಿಲ್ಲಾ ಘಟಕ ಬೆಂಬಲಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ ಜಿಲ್ಲಾಧ್ಯಕ್ಷೆ ಎಚ್. ಪದ್ಮಾ ಅವರು, ಬಾಕಿ ವೇತನ ಮತ್ತು ನಗರಸಭೆಯ ಕಾರ್ಮಿಕನಾಗಿದ್ದ ದಿ. ವೆಂಕಟೇಶ ಅವರ ಕುಟುಂಬಕ್ಕೆ ಪರಿಹಾರಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ಸಂಘಟನೆ ಬೆಂಬಲಿಸಿದೆ ಎಂದು ತಿಳಿಸಿದ್ದಾರೆ.
ನಗರಸಭೆಯ ದಿನಗೂಲಿ ಕಾರ್ಮಿಕರ ಬೇಡಿಕೆಗಳ ನ್ಯಾಯಯುತವಾಗಿದ್ದು, ಜಿಲ್ಲಾಡಳಿತ ಕೂಡಲೇ ಈ ಬೇಡಿಕೆಗಳನ್ನು ಈಡೇರಿಸುವತ್ತ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.