ಇಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ ರಾಯಚೂರು ಜೂ.7
ಮಾನವಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ. 8ರಂದು ಮಾನವಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಮಾಜಿ ಶಾಸಕ ಬೋಸರಾಜ್ ಅವರು ಅಂದು ಬೆಳಗ್ಗೆ 8.30ಕ್ಕೆ ರಾಷ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ಹಂಪಯ್ಯ ನಾಯಕ ಕನ್ನಡ ಧ್ವಜಾರೋಹಣ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೇರವೇರಿಸುವರು.
ಬೆಳಗ್ಗೆ 9ಕ್ಕೆ ಮಾನವಿ ಪಟ್ಟಣದ ಬಸವ ವೃತ್ತದಿಂದ ಸಮ್ಮೇಳನ ಸ್ಥಳ ವಾಸವಿ ಕಲ್ಯಾಣ ಮಂಟಪದವರೆಗೆ ಸಮ್ಮೇಳನಾಧ್ಯಕ್ಷ ಪಂಪಯ್ಯ ಶೆಟ್ಟಿಯವರ ಅದ್ದೂರಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11ಕ್ಕೆ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಹಂಪಯ್ಯ ನಾಯಕ ವಹಿಸುವರು.
ಮಧ್ಯಾಹ್ನ 1 ರಿಂದ ರಾಜಶೇಖರ ನೀರಮಾನ್ವಿ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿ ಮಾನವಿ ತಾಲೂಕಿನ ಇತಿಹಾಸ, ಸಂಸ್ಕೃತಿ ಕುರಿತು, ನಂತರ ಡಿ.ಜಿ. ಕರ್ಕಿಹಳ್ಳಿ ಅಧ್ಯಕ್ಷತೆಯಲ್ಲಿ 2 ನೇ ಗೋಷ್ಠಿ ಮಾನವಿ ತಾಲೂಕಿನ ಸಾಹಿತ್ಯ ಮತ್ತು ಪರಂಪರೆ ಕುರಿತು ನಡೆಯಲಿದೆ.
ಮಧ್ಯಾಹ್ನ 3 ಕ್ಕೆ ಕವಿಗೋಷ್ಠಿ ಆಯೋಜಿಸಿದ್ದು, ನಂತರ ಸನ್ಮಾನ, ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಾಲೂಕು ಕಸಾಪ ತಿಳಿಸಿದೆ.