ಟಾಟಾ ಏಸ್ ಪಲ್ಟಿ: 9 ಮಂದಿಗೆ ಗಂಭೀರ ಗಾಯ
ಲಿಂಗಸ್ಗೂರು: ಪಟ್ಟಣದ ಹೊರವಲಯದಲ್ಲಿ ಟಾಟಾ ಏಸ್ ವಾಹನ ಪಲ್ಟಿಗೊಂಡ ಪರಿಣಾಮ, ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ತಾಲೂಕಿನ ಸರ್ಜಾಪುರ ಗ್ರಾಮದಿಂದ ಟಾಟಾ ಏಸ್ ವಾಹನದಲ್ಲಿ ಸಿಮೆಂಟ್ ಚೀಲಗಳನ್ನು ಹಾಕಿಕೊಳ್ಳಲಾಗಿತ್ತು. ಇದರಲ್ಲಿ ಮಹಿಳೆಯರು ಸೇರಿದಂತೆ 13 ಜನ ಕೂಲಿಕಾರರನ್ನು ಕರೆತರುವ ವೇಳೆಯಲ್ಲಿ ಪಟ್ಟಣದ ಹೊರವಲಯದ ಶಿವು ಡಾಬಾದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಗೊಂಡಿತು. ಪರಿಣಾಮ ವಾಹನದಲ್ಲಿದ್ದ ರಾಮಣ್ಣ ಯಂಕಪ್ಪ(28), ಪ್ರೇಮಕುಮಾರ ರಾಜಾ ರಾಮ್‌ಸಿಂಗ್(13), ಯಲ್ಲಮ್ಮ ಸಿದ್ದಪ್ಪ ಬಿಳವಾರ(32), ಗೌರಮ್ಮ ಸಿದ್ದಪ್ಪ(55), ರಂಗಮ್ಮ ಅಮರಪ್ಪ(35), ಅಮರಮ್ಮ ಯಂಕೋಬ(40), ನಾಗಮ್ಮ ಹನುಮಂತ(40), ಯಲ್ಲಮ್ಮ ಗುಂಡಪ್ಪ(32), ಮಲ್ಲಮ್ಮ ಅಂಜಪ್ಪ(25) ಇವರು ಗಂಭೀರವಾಗಿ ಗಾಯಗೊಂಡ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಅದರಂತೆ ಗದ್ದೆಮ್ಮ ಪರಮಣ್ಣ(22), ಅಮರಮ್ಮ ಯಮನಪ್ಪ(31), ಅಮರಮ್ಮ ಹನುಮಂತ(45), ಹನುಮಂತ ಯಮನಪ್ಪ ಕವಲಿ(35) ಇವರು ಲಿಂಗಸ್ಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನ ಚಾಲಕ ಪರಾರಿಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್‌ಐ ಸಿದ್ದರಾಮಯ್ಯ ತಿಳಿಸಿದ್ದಾರೆ.