ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರಸಭೆ ಅಧ್ಯಕ್ಷಗಿರಿ: 'ಕೈ' ವಶಕ್ಕೆ ಯತ್ನ

Mainashree
Updated On : 8 Jun 2013, 11:51 am

ಕನ್ನಡಪ್ರಭ ವಾರ್ತೆ  ಸಿಂಧನೂರು  ಜೂ.7
ನಗರಸಭೆ ಚುನಾವಣೆ ಮುಗಿದು ಎರಡು ತಿಂಗಳು ಗತಿಸಿದ್ದು ಅಧ್ಯಕ್ಷ ಸ್ಥಾನ ಪಡೆಯಲು ಆಕಾಂಕ್ಷಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಾಫರ ಅಲಿ ಜಾಗೀರದಾರ್ ಮತ್ತು ಮಂಜುಳಾ ಪಾಟೀಲ ಪತಿ ಅಮರೇಶ ಪಾಟೀಲ್ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದುಳಿದ ವರ್ಗ 'ಎ'ಗೆ ಗುಂಪಿನ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮೀಸಲಾದರೆ ಜಾಫರ ಅಲಿ ಜಾಗೀರದಾರ್, ಹಿಂದುಳಿದ ವರ್ಗದ 'ಬಿ' ಮಹಿಳೆಗೆ ಮೀಸಲಾದರೆ ಅಥವಾ ಸಾಮಾನ್ಯ ಮಹಿಳೆಗೆ ಮೀಸಲಾದರೆ ಮಂಜುಳಾ ಪಾಟೀಲರಿಗೆ ಅಧ್ಯಕ್ಷ ಸ್ಥಾನ ಕಟ್ಟಿಟ್ಟ ಬುತ್ತಿ ಎಂಬಂತಿದೆ.
ಎಸ್‌ಸಿಗೆ ಮೀಸಲಾದರೆ ಕೆಜೆಪಿ ಪಾಲು: ಪರಿಶಿಷ್ಟ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾದರೆ ಜಗದೀಶ ಮ್ಯಾದಾರ ಅವರ ಪತ್ನಿ ಶಾರದಾ ಒಬ್ಬರೇ ಇರುವುದರಿಂದ ಅವರೇ ಅಧ್ಯಕ್ಷರಾಗುತ್ತಾರೆ. ಕೆಜೆಪಿಯಿಂದ ಗೆದ್ದಿರುವ ಜಗದೀಶ ಮ್ಯಾದಾರ ಅವರು ಪರಿಶಿಷ್ಟ ಪಂಗಡದ ಮಹಿಳೆ ಸ್ಥಾನದಿಂದ ಗೆದ್ದಿರುವ ಏಕೈಕ ಮಹಿಳೆಯಾಗಿರುವುದರಿಂದ ಬಹುಮತ ಇಲ್ಲದಿದ್ದರೂ ಅನಿವಾರ್ಯವಾಗಿ ಬಿಟ್ಟುಕೊಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ಪೂರ್ಣ ಪ್ರಮಾಣದ ಬಹುಮತ ಗಳಿಸಿರುವ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಕೆಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ಸಂಭವ ಕಡಿಮೆಯಿದೆ. ಸಾಮಾನ್ಯ ಮಹಿಳೆ, ಪ.ಜಾತಿ ಮಹಿಳೆ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ಸಿಕ್ಕಿದ್ದು ಪರಿಶಿಷ್ಟ ಪಂಗಡದ ಮಹಿಳೆಗೆ ಒಂದು ಬಾರಿಯೂ ಮೀಸಲಾತಿ ಪ್ರಕಟವಾಗಿಲ್ಲ. ಒಂದು ಬಾರಿ ಪ್ರಕಟವಾದ ಮೀಸಲಾತಿ ಪುನಃ ಅನುಷ್ಠಾನಕ್ಕೆ ಬರುವುದಿಲ್ಲ. ಆದ ಕಾರಣ ಪ.ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆಯಾಗಬಹುದೆಂದು ರಾಜಕೀಯ ಆಸಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಬಾದರ್ಲಿಗೆ ಪ್ರತಿಷ್ಠೆ ಪ್ರಶ್ನೆ: ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಇದು ಪ್ರತಿಷ್ಠೆಯ ವಿಷಯವಾಗಿದ್ದು ತಮ್ಮ ಹಿಂಬಾಲಕರನ್ನು ಬೆಂಗಳೂರಿಗೆ ಕರೆದೊಯ್ದು ಸರ್ಕಾರದ ಮಟ್ಟದಲ್ಲಿ ಕಾಂಗ್ರೆಸ್ ಮಡಿಲಿಗೆ ನಗರಸಭೆಯನ್ನು ಹಾಕಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದಾರೆ.
ಪ್ರಮುಖವಾಗಿ ಹಿಂದುಳಿದ 'ಬಿ' ಮಹಿಳೆ ಅಥವಾ ಹಿಂದುಳಿದ 'ಎ' ಇಲ್ಲವೇ ಸಾಮಾನ್ಯ ಗುಂಪಿಗೆ ಮೀಸಲಾತಿ ಘೋಷಣೆಯಾಗುವಂತೆ ಹಂಪನಗೌಡರು ಶತಯಗತಾಯ ಪ್ರಯತ್ನ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ನಗರಸಭೆಯನ್ನು ತಮ್ಮ ಪಕ್ಷದ ಸ್ವಾಧೀನಕ್ಕೆ ಪಡೆಯಲು ಸಿಎಂ ಮತ್ತು ಪೌರಾಡಳಿತ ಸಚಿವರ ಮೇಲೆ ಒತ್ತಡ ತಂದು ನಗರಸಭೆ ತೆಕ್ಕೆಗೆ ಹಾಕಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಅವರ ಆಪ್ತ ವಲಯದ ನಗರಸಭೆ ಸದಸ್ಯರೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಈ ಎಲ್ಲ ಸಂಗತಿಗಳು, ಅನುಮಾನಗಳು ಮತ್ತು ಪೈಪೋಟಿಯ ನಡುವೆ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement