ಶಿಕ್ಷಣ ಕ್ಷೇತ್ರದ ಶುದ್ಧೀಕರಣಕ್ಕೆ ಎಸ್ಎಫ್ಐ ಆಗ್ರಹ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಜೂ.7
ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ತಳ್ಳಿದೆ. ಅಂತಹ ತಪ್ಪುನೀತಿಗಳನ್ನು ಬದಲಾಯಿಸಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರವಾದ ನೀತಿಗಳನ್ನು ಜಾರಿಗೊಳಿಸಿ ಶಿಕ್ಷಣ ಕ್ಷೇತ್ರವನ್ನು ಶುದ್ಧೀಕರಣಗೊಳಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ ಕಾರ್ಯಕರ್ತರು ನೂತನ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಸಂವಿಧಾನಬದ್ಧ ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆ 2009ನ್ನು ಸಮರ್ಪಕವಾಗಿ ಜಾರಿಗೊಳಿಸುವ ಬದಲು ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಹಿಂದಿನ ಸರ್ಕಾರ ರೂಪಿಸಿತ್ತು. ಕಾಯ್ದೆಯ ಪ್ರಕಾರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೂ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಮಕ್ಕಳಿಗೆ ಪ್ರವೇಶ ನೀಡಲು ಇನ್ನಷ್ಟು ಶುಲ್ಕ ಹೆಚ್ಚಿಸುವಂತೆ ಒತ್ತಡ ಹೇರುತ್ತಿವೆ. ಕೂಡಲೇ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಮತ್ತು ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಶುಲ್ಕ ಹೆಚ್ಚಳ ಮಾಡಬಾರದು.
ಲಕ್ಷಾಂತರ ವಸೂಲಿ: ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಮಕ್ಕಳಿಗೆ ಶಿಕ್ಷಣ ನಿರಾಕರಿಸುತ್ತಿವೆ. ಪೋಷಕರಿಂದ ಲಕ್ಷಾಂತರ ರು. ವಸೂಲಿ ಮಾಡುತ್ತಿವೆ. ಡೊನೇಷನ್ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಬೇಕೆಂಬ ನಿಯಮವಿದ್ದರೂ ಅನೇಕ ಜಿಲ್ಲೆಗಳಲ್ಲಿ ಕ್ರಿಯಾಶೀಲವಿರುವುದಿಲ್ಲ. ಕೂಡಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ತಡೆಗಟ್ಟಲು ಪ್ರಾಧಿಕಾರವನ್ನು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ 38 ಸಾವಿರ ಶಿಕ್ಷಕರ ಹುದ್ದೆ, ಶೇ. 27ರಷ್ಟು ಕಾಲೇಜು ಹಾಗೂ ವಿವಿ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿವೆ. ಶೇ 68ರಷ್ಟು ಪ್ರೌಢಶಾಲೆಗಳಲ್ಲಿ ಶೌಚಾಲಯಗಳಿರುವುದಿಲ್ಲ. ಕುಡಿವ ನೀರು, ಗ್ರಂಥಾಲಯ, ಆಟದ ಮೈದಾನಗಳಿಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ. 11 ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಕೂಡಲೇ ಎಲ್ಲ ಶಾಲಾ-ಕಾಲೇಜು ಮತ್ತು ಹಾಸ್ಟೆಲ್ಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು.
ಶಾಲೆಗಳನ್ನು ಮುಚ್ಚಲು ಹುನ್ನಾರ: ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ 3174 ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ಪ್ರೊ. ಗೋವಿಂದ ವರದಿ ಶಿಫಾರಸಿನಂತೆ 12,740 ಶಾಲೆಗಳನ್ನು ಮುಚ್ಚಲು ಹಿಂದಿನ ಸರ್ಕಾರ ಹುನ್ನಾರ ನಡೆಸಿತ್ತು. ಬಡವಿದ್ಯಾರ್ಥಿಗಳು ಓದುತ್ತಿರುವ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಮುಚ್ಚಿರುವ ಶಾಲೆಗಳನ್ನು ಪುನಃ ತೆರೆಯಬೇಕು.
ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ, ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಬಡ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನ ಬಿಡುಗಡೆಯಾಗುತ್ತಿಲ್ಲ. ಕೂಡಲೆ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ಮೆಟ್ರಿಕ್ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಿಂಗಳಿಗೆ ಮೂರು ಸಾವಿರ, ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಿಂಗಳಿಗೆ ರು. 3500 ಆಹಾರ ಭತ್ಯೆ ಹೆಚ್ಚಿಸಬೇಕು.
ವಿವಿಗಳಿಗೆ ಅನುಮತಿ: ಸರ್ಕಾರಿ ವಿಶ್ವವಿದ್ಯಾಲಯಗಳು ಮೂಲ ಸೌಕರ್ಯಗಳಿಲ್ಲದೆ ನರಳುತ್ತಿವೆ. ಇವುಗಳ ಅಭಿವೃದ್ಧಿ ಅಗತ್ಯ ಹಣಕಾಸು ಒದಗಿಸುವ ಬದಲು ಹಿಂದಿನ ಸರ್ಕಾರ 22ಖಾಸಗಿ ವಿವಿಗಳಿಗೆ ಅನುಮತಿ ನೀಡಿದೆ. ಈಗಾಗಲೇ ಡೀಮ್ಡ್ ವಿವಿಗಳಾಗಿ ಅಕ್ರಮ ನಡೆಸಿ ಕಪ್ಪುಪಟ್ಟಿಗೆ ಸೇರಿದ್ದ ಶಿಕ್ಷಣ ಸಂಸ್ಥೆಗಳಿಗೆ ಈಗ ಖಾಸಗಿ ವಿವಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಹಣ ಮಾಡುವ ಉದ್ದೇಶ ಹೊಂದಿರುವ ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸಬೇಕು.
ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಐಟಿಐ ವಿದ್ಯಾರ್ಥಿಗಳ ಪಠ್ಯ ಸಮಕಾಲೀನಗೊಳಿಸಿ ಸರಳೀಕರಿಸಬೇಕು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ತಪ್ಪು ನಿರ್ಧಾರಗಳಿಂದ ಕಳೆದ ವರ್ಷ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆ, ವಿಟಿಯು ವಿದ್ಯಾರ್ಥಿಪರ ನೀತಿ ಕೈಗೊಳ್ಳಬೇಕು. ಎಂಜಿನೀಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್, ಐಟಿಐ ಕಾಲೇಜುಗಳನ್ನು ಅಗತ್ಯಕ್ಕೆ ತಕ್ಕಂತೆ ಪ್ರಾರಂಭಿಸಬೇಕು. ಇರುವ ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಸ್ಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಎಸ್.ರಂಗನಾಥ, ತಾಲೂಕು ಮುಖಂಡ ಪ್ರಶಾಂತ, ಕಾರ್ಯಕರ್ತರಾದ ಗುರುಪಾದಪ್ಪ ನಾಯಿಕೊಡಿ, ರಮೇಶ ಜಿಂಕಿ, ಅಮರೇಶ, ಯಂಕೋಬ, ರಹಿಮಾನ್, ಶಿವಾನಂದ, ಹನುಮನಗೌಡ, ಉಮೇಶ, ಪರಶುರಾಮ, ಸ್ವಾರೆಪ್ಪ, ನಿಂಗಪ್ಪ, ಹನುಮಂತ, ಅಜೀಜ್ ಇದ್ದರು.