ಸಿಂಧನೂರು; ಪಹಣಿ ಪತ್ರಕ್ಕಾಗಿ ನೂಕುನುಗ್ಗಲು
ಸಿಂಧನೂರು: ನಗರದ ತಹಸೀಲ್ದಾರ್ ಕಾರ್ಯಾಲಯದಲ್ಲಿರುವ ಪಹಣಿ ಕೇಂದ್ರದಲ್ಲಿ ಪಹಣಿ ಪತ್ರಿಕೆ ಪಡೆಯಲು ತಾಲೂಕಿನ ವಿವಿಧ ಗ್ರಾಮಗಳ ರೈತರು ಮುಗಿಬಿದ್ದಿದ್ದರು. ವಿವಿಧ ಹೋಬಳಿ ಕೇಂದ್ರಗಳಲ್ಲಿನ ಕಿಯೋಸ್ಕ ಕೇಂದ್ರಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಪಹಣಿ ಪಡೆಯಲು ಮುಂದಾದರು. ಬಳಗಾನೂರ, ತುರ್ವಿಹಾಳ, ಗುಡದೂರ, ಜವಳಗೇರಾ ಗೊರೇಬಾಳ, ಜಾಲಿಹಾಳ ಸೇರಿದಂತೆ ಇನ್ನಿತರ ಕಿಯೋಸ್ಕ್ ಕೇಂದ್ರಗಳು ತಾಂತ್ರಿಕ ದೋಷದಿಂದಾಗಿ ಕಾರ್ಯ ವಿಳಂಬಗೊಳಿಸಿದ್ದರಿಂದ ರೈತರು ಪರಿತಪಿಸುತಾಯಿತು. ಮುಂಗಾರು ಮಳೆ ಭರ್ಜರಿಯಾಗಿ ಆರಂಭವಾಗಿರುವುದರಿಂದ ಖುಷಿಯಲ್ಲಿರುವ ರೈತರು ಬ್ಯಾಂಕ್ ಸಾಲ, ಇನ್ನಿತರೆ ಕೆಲಸ ಕಾರ್ಯಗಳಿಗೆ ಅವಶ್ಯವಿರುವ ಪಹಣಿ ಪತ್ರಿಕೆಗಾಗಿ ಕೇಂದ್ರದ ಮುಂದೆ ಜಮಾಯಿಸಿದ್ದರು. ತಾಲೂಕಿನ ಹಲವು ಹಳ್ಳಿಗಳಿಂದ ನೂರಾರು ರೈತರು ಪಹಣಿ ಪತ್ರಿಕೆ ಪಡೆಯಲು ಆಗಮಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪಹಣಿ ಕೇಂದ್ರದ ಮುಂದೆ ಪೊಲೀಸ್ ಅಧಿಕಾರಿಗಳನ್ನು ಆಯೋಜಿಸಲಾಗಿತ್ತು. ರೈತರು ನೂಕುನುಗ್ಗಲಿನ ನಡುವೆ ಪ್ರಯಾಸದಿಂದ ಪಹಣಿ ಪಡೆದರು.