ಹೋರಾಟಕ್ಕೆ ಕರವೇ ಬೆಂಬಲ
ರಾಯಚೂರು: ನಗರಸಭೆಯ ದಿನಗೂಲಿ ನೌಕರರ ಸಂಘದವರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಕರವೇ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್, ನಗರಸಭೆಯ ದಿನಗೂಲಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಕಳೆದ ಅನೇಕ ತಿಂಗಳಿನಿಂದ ವೇತನ ನೀಡದ ನಗರಸಭೆ ಕ್ರಮ ಖಂಡನೀಯ ಎಂದು ಟೀಕಿಸಿದ್ದಾರೆ.
ಅದೇ ರೀತಿ ನಗರಸಭೆಯ ದಿನಗೂಲಿ ನೌಕರ ವೆಂಕಟೇಶ್ ಕರ್ತವ್ಯದ ಮೇಲಿದ್ದಾಗ ಮೃತನಾಗಿದ್ದು ಆತನ ಕುಟುಂಬದವರಿಗೆ ಪರಿಹಾರ ನೀಡಲು ನಗರಸಭೆ ಆಡಳಿತ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ನಗರಸಭೆ ಆಡಳಿತ ಕೂಡಲೇ ಮೃತನ ಸಂಬಂಧಿಕರಿಗೆ ಪರಿಹಾರ ನೀಡಬೇಕು. ದಿನಗೂಲಿ ನೌಕರರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿದ್ದಾರೆ.