ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾಕಾಪುರ ಆ(ಅನಾ)ರೋಗ್ಯ ಕೇಂದ್ರ

Mainashree
Updated On : 9 Jun 2013, 11:41 am

ಕನ್ನಡಪ್ರಭ ವಾರ್ತೆ  ಮುದಗಲ್  ಜೂ.8
ಸಮೀಪದ ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೂಕ್ತ ಸೌಕರ್ಯಗಳಿಲ್ಲದೆ ದುಸ್ಥಿತಿ ಎದುರಿಸುವಂತಾಗಿದೆ. 20 ಕಂದಾಯ ಗ್ರಾಮ ಹಾಗೂ 9 ತಾಂಡಗಳ ನಾಗರಿಕರಿಗೆ ಸೂಕ್ತ ಚಿಕಿತ್ಸೆ ದೊರೆಯಲಿ ಎಂಬ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಆರಂಭವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಇದುವರೆಗೂ ದುರಸ್ತಿ ಭಾಗ್ಯ ಕಾಣದೆ ಅನಾರೋಗ್ಯಕ್ಕೆ ಸಿಲುಕಿದೆ.
ಆರೋಗ್ಯ ಕೇಂದ್ರದ ಛಾವಣಿ ಸಿಮೆಂಟ್ ಕಳಚಿ ಕಬ್ಬಿಣದ ಸರಳುಗಳು ಹೊರಬಿದ್ದಿವೆ. ಅಲ್ಲದೆ ವೈದ್ಯರು ಮತ್ತು ಸಿಬ್ಬಂದಿ ವಾಸಕ್ಕೆಂದು ನಿರ್ಮಿಸಲಾದ ವಸತಿ ಗೃಹಗಳ ಪಾಡಂತೂ ಇದಕ್ಕಿಂತಲೂ ಅಧೋಗತಿಗೆ ತಲುಪಿವೆ. ಮುರಿದು ಹೋದ ಕಿಟಕಿ, ಬಾಗಿಲುಗಳು, ಉದುರುವ ಸಿಮೆಂಟ್, ಕಿತ್ತುಹೋದ ವಿದ್ಯುತ್ ವೈರ್‌ಗಳ ಮಧ್ಯೆ ವಾಸ ಮಾಡುವ ಪರಿಸ್ಥಿತಿ ಬಂದೊದಗಿದೆ. ಮಳೆಗಾಲ ಬಂದರೆ ಸೋರುವ ಕಟ್ಟಡಗಳಲ್ಲಿ ಸಿಬ್ಬಂದಿ ಮಳೆ ನೀರನ್ನು ಪಾತ್ರೆಯಲ್ಲಿ ತುಂಬಿ ಹೊರಹಾಕುವ ಕೆಲಸ ಮಾಡಬೇಕಾಗುತ್ತದೆ.
ದಾಖಲೆಗಳನ್ನ ಮುಚ್ಚಿಡಬೇಕಾದ ದುಸ್ಥಿತಿ: ಇದರಿಂದಾಗಿ ಔಷಧ ಸೇರಿದಂತೆ ಅಗತ್ಯ ದಾಖಲೆಗಳನ್ನು ಇಡಲು ಸರಿಯಾದ ಸ್ಥಳ ಸಿಗದೆ ಪ್ಲಾಸ್ಟಿಕ್ ಚೀಲಗಳಲ್ಲಿ ಮುಚ್ಚಿಡುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಕಟ್ಟಡ ದುರಸ್ಥಿಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರದ ಸಿಬ್ಬಂದಿ ತಿಳಿಸುತ್ತಾರೆ.
ಕೊರತೆ: ಒಟ್ಟು 6 ಹಾಸಿಗೆ ಒಳಗೊಂಡಿರುವ ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಒಬ್ಬರು ಆಯುಷ್, ಎಂಬಿಬಿಎಸ್ ವೈದ್ಯರಿದ್ದು ಮೂರು ಜನ ಸಿಬ್ಬಂದಿಯಿದ್ದಾರೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 3 ಜನ ಮಲೇರಿಯಾ ಆರೋಗ್ಯ ಸಿಬ್ಬಂದಿ, ಒಬ್ಬರು ಹಿರಿಯ ಆರೋಗ್ಯ ಸಹಾಯಕ, 1 ಎಫ್‌ಡಿಸಿ ಹುದ್ದೆ ಖಾಲಿಯಾಗಿದ್ದು ಇದುವರೆಗೂ ನೇಮಕ ಮಾಡಿಲ್ಲ. ಇದರಿಂದಾಗಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.
ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬನ್ನಿಗೋಳ ಹಾಗೂ ದೇಸಾಯಿ ಬೋಗಾಪುರದಲ್ಲಿರುವ ಆರೋಗ್ಯ ಸಹಾಯಕಿಯ ಕೇಂದ್ರ(ಎಎನ್‌ಎಂ) ಗಳಿಗೆ ಇದುವರೆಗೂ ಸಿಬ್ಬಂದಿ ನೇಮಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಿರ್ಲಕ್ಷ್ಯ: ಲಿಂಗಸ್ಗೂರು ತಾಲೂಕಿನ ಕೊನೆಯ ಹಳ್ಳಿಗಳಾದ ರಾಮತ್ನಾಳ, ದೇಸಾಯಿ ಬೋಗಾಪುರ, ಬ್ಯಾಲಿಹಾಳ ತುರಡಗಿ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳ ನಾಗರಿಕರಿಗೆ ಚಿಕಿತ್ಸೆ ನೀಡುವ ಮಾಕಾಪುರ ಆರೋಗ್ಯ ಕೇಂದ್ರದ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.
ಗ್ರಾಮೀಣ ಜನತೆಗೆ ಸೂಕ್ತ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement