ಲಿಂಗಸ್ಗೂರು- ಚಿತಾಪುರ ರಸ್ತೆಗೇಕೆ ನಿರಾಸಕ್ತಿ?
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಜೂ.8
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಲಿಂಗಸ್ಗೂರು- ರೋಡಲಬಂಡಾ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿರುವುದು ಸಂತಸದ ವಿಷಯ. ಅದರಂತೆ ಲಿಂಗಸ್ಗೂರು- ಚಿತಾಪುರ ಮಾರ್ಗದ ರಸ್ತೆ ಹದಗೆಟ್ಟು ಸಂಚಾರಕ್ಕೆ ಪರದಾಡುವಂತಾಗಿದ್ದು, ಚಿತಾಪುರ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಲ್ಲಿ ಯಾಕೆ ವಿಳಂಬ ಧೋರಣೆ ತಾಳಲಾಗಿದೆ ಎಂಬುದು ಜನರಲ್ಲಿ ಬೇಸರ ತರಿಸಿದೆ.
ಲಿಂಗಸ್ಗೂರು ಪಟ್ಟಣದಿಂದ ಇಳಕಲ್ಲ, ಬಾಗಲಕೋಟೆ, ನಾರಾಯಣಪುರ, ಆಲಮಟ್ಟಿ, ಮುದ್ದೇಬಿಹಾಳ, ಬಿಜಾಪುರ ಸೇರಿದಂತೆ ನೆರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರೋಡಲಬಂಡಾ ಹಾಗೂ ಚಿತ್ತಾಪುರ ಮಾರ್ಗದ ಅವಳಿ ರಸ್ತೆಗಳು ಹಲವು ವರ್ಷಗಳಿಂದ ಹದಗೆಟ್ಟು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿತ್ತು.
ಅದಕ್ಕಾಗಿ ಕೂಡಲೇ ರಸ್ತೆಗಳ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಈ ಭಾಗದ ಅಡವಿಬಾವಿ, ಈಚನಾಳ ತಾಂಡಾ, ರೋಡಲಬಂಡಾ (ಯುಕೆಪಿ), ಜಾವೂರ, ನೀರಲಕೇರಿ, ಆನೆಹೊಸೂರು, ಬೆಂಡೋಣಿ, ಚಿತಾಪುರ, ನರಕಲದಿನ್ನಿ ಸೇರಿದಂತೆ ಹಲವು ಗ್ರಾಮಗಳ ಜನರ ಹಾಗೂ ಸಂಘ-ಸಂಸ್ಥೆಗಳ ಹೋರಾಟದ ಫಲವಾಗಿ ಕಳೆದ ವರ್ಷ ಲಿಂಗಸ್ಗೂರು- ರೋಡಲಬಂಡಾ ರಸ್ತೆ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದು ಕಾಮಗಾರಿ ಆರಂಭಿಸಿರುವುದು ಜನರಲ್ಲಿ ಸಂತಸ ಮೂಡಿಸಿದೆ.
ಸಂಚಾರ ದುಸ್ತರ: ಆದರೆ, ಲಿಂಗಸ್ಗೂರು ಪಟ್ಟಣದಿಂದ ಚಿತಾಪುರ(ಸುಮಾರು 18 ಕಿಮೀ) ರಸ್ತೆ ಕಾಮಗಾರಿ ಆರಂಭಿಸದಿರುವುದು ಈ ಮಾರ್ಗದ ಹಳ್ಳಿಗಳ ಜನರಲ್ಲಿ ಹಾಗೂ ಸಂಚರಿಸುವ ವಾಹನ ಚಾಲಕರು, ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ. ರಸ್ತೆ ತೀವ್ರ ಹದಗೆಟ್ಟು ಸಂಚಾರಕ್ಕೆ ಬಾರದಂತಾಗಿದೆ. ಅರ್ಧ ಗಂಟೆಯಲ್ಲಿ ಸಂಚರಿಸಬೇಕಾದ ವಾಹನಗಳು ತಾಸುಗಟ್ಟಲೆ ಸಮಯ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮಳೆಗಾಲ ಆರಂಭಗೊಂಡಿದ್ದು, ಇದರಿಂದ ರಸ್ತೆಯಲ್ಲಿ ನಿರ್ಮಾಣಗೊಂಡ ತಗ್ಗು-ಗುಂಡಿಗಳಲ್ಲಿ ನೀರು ತುಂಬಿ ಕೆಸರು ಗದ್ದೆಯಂತೆ ಭಾಸವಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಮರಗಳು ಬೆಳೆದು ನಿಂತಿದ್ದು, ಎದುರಿಗೆ ಬರುವ ವಾಹನಗಳು ಸರಿಯಾಗಿ ಕಾಣುವುದಿಲ್ಲ. ಇದರಿಂದ ಶಾಲಾ ಮಕ್ಕಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ವಾಹನ ಚಾಲಕರು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬರೀ ಭಾಷಣ ಬಿಗಿದರೆ ಸಾಲದು: ಜನಪ್ರತಿನಿಧಿಗಳು ರಸ್ತೆ ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕರೆಯುವುದು ಬಾಕಿ ಇದೆ ಎಂದು ಭಾಷಣ ಬಿಗಿಯುತ್ತಾರೆಯೇ ಹೊರತು ಟೆಂಡರ್ ಪ್ರಕ್ರಿಯೆ ಆರಂಭಿಸಿ ತೀವ್ರಗತಿಯಲ್ಲಿ ರಸ್ತೆ ಕಾಮಗಾರಿಗೆ ಮುಂದಾಗುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿವಹಿಸಿ ರಸ್ತೆ ಕಾಮಗಾರಿ ಆರಂಭಿಸಬೇಕೆಂಬುದು ಈ ಭಾಗದ ಜನರ ಒತ್ತಾಸೆ.