ವಳಬಳ್ಳಾರಿ: ಪರಿಸರ ಜಾಗೃತಿ ಆಂದೋಲನ
ಸಿಂಧನೂರು: ಪರಿಸರ ಮತ್ತು ಅರಣ್ಯ ಸಚಿವಾಲಯ ನವದೆಹಲಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಸಂಯುಕ್ತಾಶ್ರಯದಲ್ಲಿ ತಾಲೂಕಿನ ವಳಬಳ್ಳಾರಿ ಗ್ರಾಮದ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಆಂದೋಲನ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಳಬಾಳ ಪ್ರೌಢಶಾಲೆಯ ಮುಖ್ಯಗುರು ಜಮೀರ ಪಾಷಾ ಜೀವವೈವಿಧ್ಯ ಮತ್ತು ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಪ್ರಸ್ತುತ ದಿನಗಳಲ್ಲಿ ಮಾನವನ ಅತಿಯಾದ ಬೇಡಿಕೆಯಿಂದಾಗಿ ಜೀವ ಸಂಕುಲ ನಾಶವಾಗುತ್ತಾ ಬಂದಿದೆ. ಅನೇಕ ಪ್ರಭೇದದ ಜೀವಿಗಳು ಕಣ್ಮರೆಯಾಗಿವೆ. ಇನ್ನೂ ಅನೇಕ ಜೀವಿಗಳು ಅಪಾಯದ ಅಂಚಿನಲ್ಲಿವೆ. ಪರಿಸರವನ್ನು ರಕ್ಷಿಸಿಕೊಳ್ಳದಿದ್ದರೆ ಕುಡಿಯುವ ನೀರು ಕೊಂಡುಕೊಂಡಂತೆ ಗಾಳಿಯ ಪೊಟ್ಟಣಗಳನ್ನು ಕೊಂಡುಕೊಳ್ಳಬೇಕಾಗುತ್ತದೆ. ಯುವ ಪೀಳಿಗೆಯು ಪರಿಸರವನ್ನು ರಕ್ಷಿಸಿ ಬೆಳೆಸಬೇಕಿದೆ. ಆ ಬಗ್ಗೆ ಜಾಗೃತಿಯೂ ಅಗತ್ಯ ಎಂದು ಪ್ರತಿಪಾದಿಸಿದರು.
ಶಾಲೆಯ ಮುಖ್ಯಗುರು ಬಸವಲಿಂಗಪ್ಪ, ವಿಜ್ಞಾನ ಶಿಕ್ಷಕ ಶಂಭುಲಿಂಗಯ್ಯ ವೇದಿಕೆಯಲ್ಲಿದ್ದರು. ಪರಿಮಳ ಹಾಗೂ ಮಂಜುಳಾ ಪ್ರಾರ್ಥಿಸಿದರು. ಮಲ್ಲಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಗಪ್ಪ ಸ್ವಾಗತಿಸಿದರು. ಪಾಪಣ್ಣ ಅತಿಥಿಗಳ ಪರಿಚಯ ಮಾಡಿಕೊಟ್ಟರು.