ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಗೋ ಇಲ್ಲಿವೆ ನೋಡಿ, ನಮ್ಮೂರ ಕನ್ನಡ ಶಾಲೆಗಳು...

Lingaraj Badiger
Updated On : 10 Jun 2013, 11:24 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.9
ಸಿಂಧನೂರು ನಗರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ (ಟಿಬಿಪಿ ಕ್ಯಾಂಪ್) ಶಾಲೆಯ ಕೆಲ ಕೊಠಡಿಗಳು ಯಾವಾಗಲೂ ತೆರೆದಿರುತ್ತವೆ. ಇವುಗಳಿಗೆ ಬಾಗಿಲುಗಳೇ ಇಲ್ಲ...
ಆವರಣದೊಳಗೆ ಕಸಕಡ್ಡಿ, ತ್ಯಾಜ್ಯ ವಸ್ತುಗಳು ಹೇರಳವಾಗಿ ಬಿದ್ದಿವೆ. ಟಿನ್ ಷೆಡ್‌ನ ತರಗತಿ ಕೊಠಡಿಗಳಲ್ಲಿ ಶಹಬಾದಿ ಬಂಡೆಗಳು ಸಮತಟ್ಟಾಗಿಲ್ಲ. ಬಾಗಿಲಿಲ್ಲದ ಕೊಠಡಿಯೊಂದರಲ್ಲಿ ನಾಯಿಯೊಂದು ಮಲಗಿದ್ದರೆ, ಕೆಲವೊಂದು ಕೊಠಡಿಗಳಲ್ಲಿ ಹೊಲಸು ಬಿದ್ದಿದೆ. ಇತರೆ ಶಾಲೆಗಳಿಗಿಂತ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯುವ ಸರ್ಕಾರಿ ಶಾಲೆಯ ಪರಿಸ್ಥಿತಿ ಇಲ್ಲಿನ ಸಾರ್ವಜನಿಕರಲ್ಲಿ ಅಸಮಾಧಾನ ತಂದಿದೆ.
ಬೋಳು ಮರಗಳು, ಶಿಥಿಲಗೊಂಡ ಕಟ್ಟಡಗಳು, ನೆನಗುದಿಗೆ ಬಿದ್ದ ನೂತನ ಕಟ್ಟಡ ಕಾಮಗಾರಿ ರಾಚುತ್ತಿವೆ. ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಪೂರಕವಾಗಬಹುದಾದ ವಾತಾವರಣ ನಿರ್ಮಿಸುವಲ್ಲಿ ಈ ಶಾಲೆ ವಿಫಲವಾಗಿದೆ. ಶಾಸಕರ ಮಾದರಿ ಶಾಲೆಯೇ ಹೀಗಿದ್ದರೆ ಉಳಿದ ಶಾಲೆಗಳ ಸ್ಥಿತಿ ಹೇಗೆ ಎಂದು ಸಾರ್ವಜನಿಕರು ಯೋಚಿಸುವಂತಾಗಿದೆ.

ಸ್ಮಶಾನಕ್ಕೆ ಹೊಂದಿಕೊಂಡ ಅಂಬೇಡ್ಕರ್ ನಗರ ಶಾಲೆ!
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.9
ಸಿಂಧನೂರು ನಗರದ ಅಂಬೇಡ್ಕರ್ ನಗರದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ಇಲ್ಲ. ಹಂದಿ, ನಾಯಿಗಳು ರಾಜಾರೋಷವಾಗಿ ಆವರಣದಲ್ಲಿ ಅಡ್ಡಾಡುತ್ತವೆ. ಶಾಲೆಯ ಕಿಟಿಕಿಯ ಬಳಿ ಚರಂಡಿಯೊಂದು ಹಾದು ಹೋಗಿದೆ. ಇದರ ದುರ್ವಾಸನೆ ಸಹಿಸಲಸಾಧ್ಯವಾಗಿದೆ.
ಪಕ್ಕದಲ್ಲಿ ಸ್ಮಶಾನ ಇರುವುದರಿಂದ ಶಾಲೆಯೊಳಗೆ ಹುಡುಗರು ಎದ್ದು ನಿಂತರೆ ಸಾಕು ಕಿಟಿಕಿಯೊಳಗೆ ಚಟ್ಟ, ಸಮಾಧಿಗಳು ಕಾಣುತ್ತವೆ. ಆವರಣದ ಸ್ವಚ್ಛತೆ ಬಗ್ಗೆ ಎಸ್‌ಡಿಎಂಸಿಯಾಗಲಿ, ಶಿಕ್ಷಕ ವೃಂದವಾಗಲಿ ಹೆಚ್ಚಿನ ಮುತುವರ್ಜಿ ನೀಡಿಲ್ಲ. ಸುತ್ತಮುತ್ತ ಸಾರ್ವಜನಿಕರ ಮನೆಗಳಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ನಿವಾಸಿಗಳಾದ ಅಮರೇಶ, ಚಂದ್ರಶೇಖರ, ಈರಪ್ಪ ಮತ್ತಿತರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕಾಂಪೌಂಡ್ ನಿರ್ಮಿಸಿ ಅನುಕೂಲ ಕಲ್ಪಿಸುವಂತೆ ಹಲವಾರು ಬಾರಿ ಒತ್ತಾಯಿಸಿದರೂ ಇದುವರೆಗೂ ಪ್ರಯೋಜನಕ್ಕೆ ಬಂದಿಲ್ಲವೆನ್ನುವುದು ಅವರ ಹೇಳಿಕೆ. ಸಾಯಂಕಾಲ ತರಗತಿಗಳು ಮುಗಿದ ಬಳಿಕ ಪುಂಡಪೋಕರಿಗಳು ಅಡ್ಡೆಯಾಗಿ ಶಾಲೆ ಮಾರ್ಪಡುತ್ತದೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ, ಕುಡಿವ ನೀರಿನ ಸೌಲಭ್ಯದ ಸ್ವಚ್ಛತೆಗೆ ಅಷ್ಟಾಗಿ ಗಮನ ಕೊಟ್ಟಿಲ್ಲವೆಂದು ದೂರಿದರು.

ಶೆಡ್‌ನಲ್ಲಿ ವಳಬಳ್ಳಾರಿ ಶಾಲಾ ಮಕ್ಕಳ ಕಲಿಕೆ
ಸಿಂಧನೂರು: ಬಹುತೇಕ ಕೂಲಿ ಕಾರ್ಮಿಕರೇ ವಾಸಿಸುವ ಸಿಂಧನೂರು ನಗರದ ಜನತಾ ಕಾಲೋನಿಯಲ್ಲಿರುವ ಸರ್ಕಾರದ ಅನುದಾನಕ್ಕೆ ಒಳಪಟ್ಟ ವಳಬಳ್ಳಾರಿ ಚನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಕೆಲ ತರಗತಿಗಳು ತಗಡಿನ ಶೆಡ್‌ನಲ್ಲಿ ನಡೆಯುತ್ತಿವೆ.
ಈ ಶಾಲೆಗೆ ಶಾಸಕ ಹಂಪನಗೌಡ ಬಾದರ್ಲಿ ಅವರ ಸಂಬಂಧಿಗಳ ಆಡಳಿತ ಮಂಡಳಿ ಇದ್ದರೂ ಇನ್ನೂ ಕಟ್ಟಡ ಭಾಗ್ಯ ಕಂಡಿಲ್ಲ. ಮಳೆ ಬಂದರೆ ತರಗತಿ ಕೊಠಡಿಗಳು ಸೋರುತ್ತವೆ. ಮಳೆ ನೀರು ಪ್ರೌಢಶಾಲೆಯ ಕೊಠಡಿಯೊಳಗೆ ಹೋಗುತ್ತೇವೆಂದು ಅದೇ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಹೇಳುತ್ತಾನೆ.
ಈ ಶಾಲೆಗೆ ಕಾಂಪೌಂಡ್ ಇಲ್ಲ. ಪಕ್ಕದಲ್ಲಿ ಸ್ಮಶಾನ ಇದೆ. ಜೊತೆಗೆ ಚರಂಡಿಯ ದುರ್ವಾಸನೆ ಹೆಚ್ಚಿದೆ. ನಾಲ್ಕು ತಟ್ಟಿಯ ಮಧ್ಯೆ ಬಿಸಿಯೂಟದ ಅಡುಗೆ ಕೋಣೆ ಇದೆ. ಕುಡಿಯುವ ನೀರಿನ ತೊಟ್ಟಿಯ ಬಳಿ ಬೇಲಿ ಬೆಳೆದಿದೆ. ಸಿಂಟೆಕ್ಸ್ ಅಳವಡಿಸಿದ್ದರೂ ಅದರಲ್ಲಿ ಹನಿ ತೊಟ್ಟಿಕ್ಕುತ್ತಿಲ್ಲ. ಇಲ್ಲಿ ಶಾಲಾ ವಿದ್ಯಾರ್ಥಿಗಳು ಕಲಿಯಲು ಬೇಕಾದ ಪೂರಕ ವಾತಾವರಣ ಇಲ್ಲದಿರುವುದು ಕಂಡುಬಂತು. ತರಗತಿ ಕೊಠಡಿಗಳ ಕಿಟಕಿಯ ಪಕ್ಕದಲ್ಲಿ ಮುಳ್ಳು ಬೇಲಿಗಳಿವೆ. ಶಾಲಾ ವಾತಾವರಣದಲ್ಲಿನ ಸ್ವಚ್:್ತೆ ಬಗ್ಗೆ ಆಡಳಿತ ಮಂಡಳಿಯಾಗಲಿ, ಶಿಕ್ಷಕರಾಗಲಿ ಗಮನಹರಿಸಿಲ್ಲ.
ಜನತಾ ಕಾಲೋನಿಯ ಬಡ ಮಕ್ಕಳಿಗೆ ಇದೇ ಶಾಲೆಯೇ ಆಧಾರ. ಆದರೆ ಪೂರಕ ವಾತಾವರಣದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದ ಶಾಲೆ ಕೊರತೆಗಳ ಗೂಡಾಗಿದೆ. ಮೂಲ ಸೌಕರ್ಯಗಳು ಇಲ್ಲಿ ಮರೀಚಿಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement