ನಗರ ನೈರ್ಮಲೀಕರಣ ಕಾರ್ಯಾಗಾರ ವಿಫಲ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.9
ನಗರದ ನಗರಸಭೆ ಸಭಾಂಗಣದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ ಗವರ್ನ್ಮೆಂಟ್ ಆಶ್ರಯದಲ್ಲಿ ಬಿಆರ್ಜಿಎಫ್ ಯೋಜನೆಯಡಿ ನಗರ ನೈರ್ಮಲೀಕರಣ ಯೋಜನೆ(ಸಿಟಿ ಸ್ಯಾನಿಟೇಶನ್ ಪ್ಲಾನ್) ತಯಾರಿಸುವ ಬಗ್ಗೆ ಕಾರ್ಯಾಗಾರ ನಡೆಯಿತಾದರೂ ಯೋಜನಾ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯರ ಮಧ್ಯದ ಸಂವಹನ ಕೊರತೆಯಿಂದ ಯಾವುದೇ ನಿರ್ಧಾರ ಕೈಗೊಳ್ಳಲಾಗಲಿಲ್ಲ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ ಗವರ್ನ್ಮೆಂಟ್ ಪ್ರೋಗ್ರಾಂ ಅಧಿಕಾರಿಗಳಾದ ಅನುರುದ್ದೀನ್ ಪಡಾಲ್, ನಿಕಿಲ್ ವಡದ್ ಕಾರ್ಯಾಗಾರದಲ್ಲಿ ಮಾತನಾಡಿ, ನಗರದಲ್ಲಿ ಕಸ ವಿಲೇವಾರಿ ಮಾಡಿಕೊಳ್ಳುವುದು. ಸ್ವಚ್ಛತೆ ಕಾಪಾಡಿಕೊಳ್ಳುವ ಹಾಗೂ ಕಸ ವಿಲೇವಾರಿ ಎಷ್ಟು ದಿನಕ್ಕೊಮ್ಮೆ ಮಾಡಿಕೊಂಡರೆ ಒಳಿತು. ವಿಲೇವಾರಿಗೊಂಡ ಕಸ ದೂರ ಸಾಗಿಸಿ ನಗರ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು.
ಕಸ ಸಾಗಣೆ ಸಮಸ್ಯೆ: ಕಸ ವಿಲೇವಾರಿ ಉಸ್ತುವಾರಿ ಹೊತ್ತಿರುವ ಸ್ವಸಹಾಯ ಗುಂಪಿನ ಶ್ರೀದೇವಿ ಶ್ರೀನಿವಾಸ ಮಾತನಾಡಿ, ನಗರದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಕಸ ಸಂಗ್ರಹಿಸಲಾಗುತ್ತಿದ್ದು ಅದನ್ನು ದೂರ ಸಾಗಿಸುವುದು ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಹೆಚ್ಚಿನ ರೀತಿಯಲ್ಲಿ ಕಸ ಸಂಗ್ರಹವಾಗುತ್ತಿದೆ. ಅದನ್ನು ಬೇರೆಡೆಗೆ ಕಳುಹಿಸುವ ಮಾರ್ಗೋಪಾಯ ನೀಡಬೇಕೆಂದು ಮನವಿ ಮಾಡಿದರು.
ನಗರಸಭೆ ವ್ಯವಸ್ಥಾಪಕ ಗುರುರಾಜ ಮಾತನಾಡಿ, ನಗರದಲ್ಲಿ ಸಂಗ್ರಹಿಸಿದ ಕಸವನ್ನು ಬೇರೆಡೆಗೆ ಕಳುಹಿಸುವ ಸಂಬಂಧ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಈ ಕಾರ್ಯಾಗಾರದ ಸದುಪಯೋಗ ಪಡೆದು ನಗರ ಸ್ವಚ್ಛತೆಗೆ ಸ್ಪಂದಿಸಬೇಕೆಂದರು.
ನಗರಸಭೆ ಪೌರಾಯುಕ್ತ ನಾಸೀರ್ಅಲಿ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಚಂದ್ರಶೇಖರ ಮೈಲಾರ, ಶರಣಬಸವರಾಜ ನಟೇಕಲ್, ಪ್ರಭುರಾಜ, ಶರಣಯ್ಯಸ್ವಾಮಿ, ನಗರಸಭೆ ಕಂದಾಯ ಅಧಿಕಾರಿ ಗುಂಡಪ್ಪ, ನಗರಸಭೆ ಸದಸ್ಯರು ಹಾಗೂ ಸ್ವಸಹಾಯ ಗುಂಪಿನ ಮಹಿಳೆಯರು ಪಾಲ್ಗೊಂಡಿದ್ದರು.
ಹಿಂದಿಯಲ್ಲಿ ಚರ್ಚೆ- ಅಪಸ್ವರ: ನಗರದ ನಗರಸಭೆ ಸಭಾಂಗಣದಲ್ಲಿ ನಡೆದ ನಗರ ನೈರ್ಮಲೀಕರಣ ಯೋಜನೆ ತಯಾರಿಕೆ ಕಾರ್ಯಾಗಾರದಲ್ಲಿ ಕೆಲ ನಗರಸಭೆ ಸದಸ್ಯರು ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಅಪಸ್ವರ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ನೀಡಲು ಬಂದಿರುವ ಕಾರ್ಯಕ್ರಮ ಅಧಿಕಾರಿಗಳು ಬರೀ ಹಿಂದಿ ಭಾಷೆಯಲ್ಲಿ ಕಸ ವಿಲೇವಾರಿ ಸೇರಿದಂತೆ ಇನ್ನಿತರ ವಿಷಯದ ಬಗ್ಗೆ ಚರ್ಚಿಸಿರುವುದು ತಮಗೆ ತಿಳಿದಿಲ್ಲ. ನಗರಸಭೆ ಅಧಿಕಾರಿಗಳು ಇದನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ಮಾಹಿತಿ ನೀಡಬೇಕೆಂದು ತಾಕೀತು ಮಾಡಿದರು.
ಆದರೆ ಮಾಹಿತಿ ಗೊತ್ತಿರದ ನಗರಸಭೆ ಅಧಿಕಾರಿಗಳು ಕಸ ವಿಲೇವಾರಿಗಾಗಿ ಈ ಕಾರ್ಯಾಗಾರ ನಡೆಯುತ್ತಿದೆ. ಅಷ್ಟೇ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿ ಜಾರಿಕೊಂಡರು.